ನವದೆಹಲಿ: ಬೀದಿ ನಾಯಿಗಳ (Stray Dog) ಮೇಲಿನ ಸ್ವಯಂ ಪ್ರೇರಿತ ಆದೇಶಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ನಡೆಸಿದ್ದು, ಸುಪ್ರೀಂನ ಹೊಸ ಮೂವರು ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ನಡೆಸಲಿದ್ದಾರೆ.
ಇದೇ ಸಂದರ್ಭ ಸುಪ್ರೀಂ ಕೋರ್ಟ್ ಆವರಣದಲ್ಲಿ ಬೀದಿ ನಾಯಿಯೊಂದು ಓಡಾಡಿರುವ ಫೋಟೋ ವೈರಲ್ ಆಗುತ್ತಿದೆ.
ಪ್ರಕರಣದ ಬಗ್ಗೆ ನ್ಯಾಯಾಲಯವು ಇಂದು ವಿಚಾರಣೆ ನಡೆಸಲಿರುವ ಸಂದರ್ಭವೇ ಸುಪ್ರೀಂ ಕೋರ್ಟ್ ಆವರಣದಲ್ಲಿ ಬೀದಿ ನಾಯಿಯೊಂದು ಕಾಣಿಸಿಕೊಂಡಿದೆ. ನಾಯಿ, ನಮಗೆ ನ್ಯಾಯ ಸಿಗುತ್ತಾ..? ಸ್ವತಂತ್ರ ಹಾಗೂ ನಿಶ್ಚಿಂತೆಯಿಂದ ದೆಹಲಿಯಲ್ಲಿ ನಾವೂ ಬದುಕಬಹುದಾ ಎಂದು ನ್ಯಾಯಾಲಯದ ಮುಂದೆ ನಿಂತು ಮೂಕವಾಗಿಯೇ ಕೇಳುತ್ತಿರುವಂತೆ ತೋರಿದೆ. ಈ ಕರುಣಾಜನಕ ಫೋಟೋ ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.
ಈ ಹಿಂದೆ ಈ ಪ್ರಕರಣದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು ಬೀದಿ ನಾಯಿಗಳನ್ನು ಹಿಡಿದು, ಅವುಗಳ ಸಂತಾನಹರಣ ಮಾಡಿ ಮತ್ತು ಆಶ್ರಯ ಮನೆಯಲ್ಲಿ ಶಾಶ್ವತವಾಗಿ ಇರಿಸಬೇಕು ಎಂದು ಆದೇಶಿಸಿದ್ದರು. ಇದೀಗ ಬಿಡುಗಡೆಯಾದ ಪಟ್ಟಿಯಿಂದ ಅವರನ್ನು ಕೈಬಿಡಲಾಗಿದೆ.
ದೆಹಲಿಯಲ್ಲಿನ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಒಟ್ಟುಗೂಡಿಸಿ ಗಾಜಿಯಾಬಾದ್, ನೋಯ್ಡಾ, ಫರಿದಾಬಾದ್, ಗುರಗಾಂವ್ ಹಾಗೂ ಎನ್ ಸಿ ಆರ್ ಪ್ರದೇಶದ ಹೊರವಲಯಗಳಿಂದ ನಾಯಿಯನ್ನು ಗೊತ್ತುಪಡಿಸಿದ ಆಶ್ರಯದಲ್ಲಿ ಕರೆದೊಯ್ಯಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ನಾಯಿ ಆಶ್ರಯಗಳನ್ನು ನಿರ್ಮಿಸುವಂತೆ ಸೂಚಿಸಲಾಗಿದೆ.
ಆದರೆ ಕೋರ್ಟ್‌ನ ತೀರ್ಪಿಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಖ್ಯಾತ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಸೇರಿದಂತೆ ಹಲವು ನಟ ನಟಿಯರು ಕೂಡಾ ಸುಪ್ರೀಂ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕಪಿಲ್ ದೇವ್ ಅವರು ಬೀದಿ ನಾಯಿಗಳಿಗೆ ಆಹಾರ ಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡು, ಮೂಕ ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಬೀದಿನಾಯಿಗಳ ಬದುಕು ಕಸಿಯಬೇಡಿ. ಬದುಕೋಕೆ ಅವಕಾಶ ಕೊಡಿ ಎಂದು ಹೇಳಿದ್ದಾರೆ.
ಸುಪ್ರೀಂ ಆದೇಶಕ್ಕೆ ಸಂಸತ್ ವಿಪಕ್ಷ ನಾಯಕ ರಾಹುಲ್ ಆಕ್ಷೇಪ ವ್ಯಕ್ತಪಡಿಸಿ, ಈ ನಿರ್ಧಾರವು ಹಲವು ವರ್ಷಗಳಿಂದ ಅನುಸರಿಸುತ್ತಿರುವ ಮಾನವೀಯ ಹಾಗೂ ವಿಜ್ಞಾನಾಧಾರಿತ ನೀತಿಯಿಂದ ಹಿಂದಕ್ಕೆ ಸರಿದಂತಾಗಿದೆ. ಮೂಖ ಜೀವಿಗಳು ಅಳಿಸಬೇಕಾದ ಸಮಸ್ಯೆಗಳಲ್ಲ. ಶಸ್ತ್ರಚಿಕಿತ್ಸೆ, ಲಸಿಕೆ ಹಾಗೂ ಸಮುದಾಯದ ಕಾಳಜಿ ಮೂಲಕ ಬೀದಿಗಳನ್ನು ಕ್ರೂರತೆ ಇಲ್ಲದೆ ಸುರಕ್ಷಿತವಾಗಿರಿಸಬಹುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದರು.
ಇನ್ನು ಕನ್ನಡದ ನಟ ರಾಜ್ ಬಿ ಶೆಟ್ಟಿ ಅವರು, ತಾವು ಏಳು ದೇಶೀಯ ನಾಯಿಗಳನ್ನು ಸಾಕಿದ್ದಾಗಿ ತಿಳಿಸಿದ್ದು, ಅವುಗಳಿಂದ ಪ್ರೀತಿ ಅಪಾರವಾಗಿ ಸಿಗುತ್ತದೆ, ಬೀದಿ ನಾಯಿಗಳನ್ನು ಸಾಧ್ಯವಾದಷ್ಟು ಜನರು ಮನೆಯಲ್ಲಿ ಸಾಕಿ ಎಂದು ಜನರಿಗೆ ಕರೆ ಕೊಟ್ಟಿದ್ದಾರೆ.

