ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಅಂಗಡಿಮೊಗರು ನಿವಾಸಿಯೊಬ್ಬರಿಗೆ ಆನ್‍ಲೈನ್ ಟ್ರೇಡಿಂಗ್ ಹೆಸರಲ್ಲಿ 42ಲಕ್ಷ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ವಿಜಯವಾಡ ನಿವಾಸಿ ವಡಲಮುಡಿ ಫನಿ ಕುಮಾರ್(40)ಎಂಬಾತನನ್ನು ಕಾಸರಗೋಡು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಫನಿಕುಮಾರ್, ಅಂಗಡಿಮೊಗರು ನಿವಾಸಿಯನ್ನು ವಾಟ್ಸಪ್‍ನ ಧನಿ ಟಇಆರ್‍ಡಿ ಎಂಬ ನಕಲಿ ಅಪ್ಲಿಕೇಶನ್ ಮೂಲಕ ಸಂಪರ್ಕಿಸಿ ಆನ್‍ಲೈನ್ ಟ್ರೇಡಿಂಗ್ ಹೆಸರಲ್ಲಿ 4241000 ರೂ.ಪಡೆದು ವಂಚಿಸಿದ್ದನು. 2025 ಏಪ್ರಿಲ್ 4ರಿಂದ 21ರ ವರೆಗಿನ ಕಾಲಾವಧಿಯಲ್ಲಿ ಈ ಮೊತ್ತ ಎಗರಿಸಿದ್ದನು. ಅಂಗಡಿಮೊಗರು ನಿವಾಸಿ ನೀಡಿದ ದೂರಿನನ್ವಯ ಸೈಬರ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ಆರೋಪಿಯನ್ನು ಆಂಧ್ರಪ್ರದೇಶದಿಂದ ಬಂಧಿಸಲಾಗಿದೆ. ಈತನ ವಿರುದ್ಧ ಆಂಧ್ರಪ್ರದೇಶದ ಹೈದರಾಬಾದ್ ಶಾಚಿಬೊಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲೂ ಸಮಾನ ವಂಚನೆಯ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ನಿರ್ದೇಶ ಪ್ರಕಾರ ಕಾಸರಗೋಡು ಸ್ಪೆಶ್ಯಲ್ ಕ್ರೈಂ ಪೊಲೀಸ್ ಠಾಣೆ ಪ್ರಭಾರ ಇನ್ಸ್‍ಪೆಕ್ಟರ್ ವಿಪಿನ್ ಯು.ಪಿ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

