HEALTH TIPS

ಉತ್ತರ ಪ್ರದೇಶ: ಎಸ್‌ಪಿ ನಾಯಕ ಅಜಂ ಖಾನ್‌ ಜೈಲಿನಿಂದ ಬಿಡುಗಡೆ

 ಸೀತಾಪುರ : ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಅಜಂ ಖಾನ್‌ ಜಾಮೀನಿನ ಮೇಲೆ ಸೀತಾಪುರ ಜೈಲಿನಿಂದ ಮಂಗಳವಾರ ಬಿಡುಗಡೆಯಾದರು.

ಎರಡು ವರ್ಷಗಳಿಂದ ಜೈಲಿನಲ್ಲಿದ್ದ ಅವರು, ಬಿಳಿ ಕುರ್ತಾ, ಪೈಜಾಮ ಮತ್ತು ಕಪ್ಪು ಬಣ್ಣದ ವೇಸ್‌ಕೋಟ್‌ ಧರಿಸಿ ಜೈಲು ಆವರಣದಿಂದ ಹೊರಬಂದು, ಖಾಸಗಿ ವಾಹನದಲ್ಲಿ ತೆರಳಿದರು.

ಜೈಲು ಆವರಣದಲ್ಲಿ ಕಾಯುತ್ತಿದ್ದ ಸುದ್ದಿಗಾರರಿಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.


ಖಾನ್‌ ಅವರ ಹಿರಿಯ ಮಗ ಅದೀಬ್‌, ಎಸ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ಅನೂಪ್‌ ಗುಪ್ತಾ, ಮುರಾದಾಬಾದ್‌ ಸಂಸದೆ ರುಚಿ ವೀರಾ ಸೇರಿದಂತೆ ಎಸ್‌ಪಿಯ ಹಲವು ನಾಯಕರು ಮತ್ತು ಕಾರ್ಯಕರ್ತರು ಖಾನ್‌ ಸ್ವಾಗತಕ್ಕಾಗಿ ಜೈಲಿನ ಬಳಿ ಜಮಾಯಿಸಿದ್ದರು.

ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅದೀಬ್‌, 'ಜೈಲಿನಿಂದ ಹೊರ ಬಂದ ಬಳಿಕ ನನ್ನ ತಂದೆ ಅವರು ಏನನ್ನು ಹೇಳಬೇಕೊ ಅದನ್ನೆಲ್ಲ ಹೇಳುತ್ತಾರೆ' ಎಂದು ಹೇಳಿದ್ದರು.

'ಖಾನ್‌ ಅವರು ತೀವ್ರ ನೋವನ್ನು ಅನುಭವಿಸಿದ್ದಾರೆ. ಅವರಿಗೆ ನೀಡಿರುವಷ್ಟು ಕಿರುಕುಳವನ್ನು ಬೇರೆ ಯಾವುದೇ ರಾಜಕಾರಣಿಗೆ ನೀಡಿಲ್ಲ. ನ್ಯಾಯಾಂಗದ ಮೇಲೆ ನಮ್ಮ ನಂಬಿಕೆ ಮುಂದುವರಿಯುತ್ತದೆ' ಎಂದು ಪ್ರತಿಕ್ರಿಯಿಸಿದ ಸಂಸದೆ ರುಚಿ ವೀರಾ ಅವರು, 'ಈ ದಿನವನ್ನು ಪಕ್ಷವು ವಿಜಯದ ದಿನವಾಗಿ ಆಚರಿಸುತ್ತದೆ' ಎಂದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಸೀತಾಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಇದರ ನಡುವೆಯೂ ಹಲವರು ವಾಹನಗಳ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಎಸ್‌ಪಿ ಅಧಿಕಾರಕ್ಕೆ ಬಂದರೆ ಖಾನ್‌ ವಿರುದ್ಧದ ಪ್ರಕರಣಗಳು ಹಿಂದಕ್ಕೆ: ಅಖಿಲೇಶ್‌ ಯಾದವ್‌

ರಾಜ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ನಾಯಕ ಅಜಂ ಖಾನ್‌ ವಿರುದ್ಧ ದಾಖಲಾಗಿರುವ ಎಲ್ಲ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮಂಗಳವಾರ ತಿಳಿಸಿದರು.

'ಸಮಾಜವಾದಿ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಖಾನ್‌ ಅವರು ಸಮಾಜವಾದಿ ಚಳವಳಿಯ ಪ್ರಮುಖ ಪಾತ್ರಧಾರಿಯೂ ಹೌದು. ಕಡೆಗೂ ಅವರಿಗೆ ನ್ಯಾಯ ದೊರೆತಿದೆ' ಎಂದು ಅಖಿಲೇಶ್‌ ಸುದ್ದಿಗಾರರಿಗೆ ಹೇಳಿದರು.

'ರಾಜ್ಯದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಅವರು ಸ್ವತಃ ತನ್ನ ಮೇಲಿದ್ದ ಪ್ರಕರಣಗಳನ್ನು ಹಿಂಪಡೆದಿದ್ದರು. ಅಂತೆಯೇ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿಯ ಇತರ ನಾಯಕರ ವಿರುದ್ಧದ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿತ್ತು. ಅದೇ ರೀತಿ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅಜಾಂ ಖಾನ್‌ ಮತ್ತು ಇತರರ ವಿರುದ್ಧದ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲಾಗುವುದು' ಎಂದು ಅವರು ಪ್ರತಿಪಾದಿಸಿದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries