ಕಾಸರಗೋಡು: ನಾಡಿನಾದ್ಯಂತ ತಿರುವೋಣಂ ಉತ್ಸವ ಸೆ. 5ರಂದು ಜರುಗಲಿದೆ. ಈ ಬಾರಿ ತಿರುವೋಣಂ ಹಾಗೂ ಈದ್‍ಮಿಲಾದ್ ಒಂದೇ ದಿನ ಆಚರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಜನಸಂದಣಿಯೂ ಹೆಚ್ಚಾಗಿತ್ತು. ಬಟ್ಟೆ, ಪಾದರಕ್ಷೆ, ಹೂವಿನ ಖರೀದಿಗಾಗಿ ಜನತೆ ಭಾರೀ ಸಂಖ್ಯೆಯಲ್ಲಿ ನಗರದಲ್ಲಿ ಜಮಾಯಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಕಾಸರಗೋಡು ಪೇಟೆ ಹೆಚ್ಚು ಬ್ಯುಸಿಯಾಗಿತ್ತು.
ಹೂವಿನ ಹಬ್ಬವೆಂದೇ ಖ್ಯಾತಿ ಪಡೆದಿರುವ ಓಣಂ ಹಬ್ಬಕ್ಕಾಗಿ ಕರ್ನಾಟಕ, ತಮಿಲ್ನಾಡು ಸೇರಿದಂತೆ ಇತರ ರಾಜ್ಯಗಳಿಂದ ಹೂವಿನ ವ್ಯಾಪಾರಿಗಳು ಕಾಸರಗೋಡಿಗೆ ಆಗಮಿಸಿದ್ದಾರೆ. ಜತೆಗೆ ನಾನಾ ಕಡೆಯಿಂದ ತರಕಾರಿ ವ್ಯಾಪಾರಿಗಳೂ ನಗರದಲ್ಲಿ ಬೀಡು ಬಿಟ್ಟಿದ್ದು, ಬಿರುಸಿನ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಕುಟುಂಬಶ್ರೀ ಸಿಡಿಎಸ್ ಘಟಕಗಳಿಂದ ಓಣಂ ವ್ಯಾಪಾರಿ ಮಳಿಗೆ, ಸರ್ಕಾರದ ನಾಗರಿಕ ಪೂರೈಕೆ ಇಲಾಖೆಯಿಂದ ಓಣಂ ಸಂತೆಗಳೂ ಕಾರ್ಯಾಚರಿಸುತ್ತಿದೆ.

