ಕಾಸರಗೋಡು: ನಗರದ ಅಡ್ಕತ್ತಬೈಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಡ್ಡ ದಾಟುತ್ತಿದ್ದ ಗೃಹಿಣಿ ಕಾರು ಬಡಿದು ದಾರುಣವಾಗಿ ಮೃತಪಟ್ಟಿದ್ದಾರೆ. ಅಡ್ಕತ್ತಬೈಲು ಕಲ್ಲುವಳಪ್ಪು ನಿವಾಸಿ ಯೂಸುಫ್ ಎಂಬವರ ಪತ್ನಿ ನಾಸಿಯ (51) ಮೃತಪಟ್ಟ ಮಹಿಳೆ. ಅಪಘಾತದ ಗಂಭೀರ ದೃಶ್ಯ ಸನಿಹದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂರು ಲೇನ್‍ನಲ್ಲಿರುವ ರಸ್ತೆಯಲ್ಲಿ ಲಾರಿಯೊಂದು ಆಗಮಿಸುತ್ತಿರುವ ಮಧ್ಯೆ ಮಹಿಳೆ ರಸ್ತೆ ಅಡ್ಡ ದಾಟುತ್ತಿದ್ದಂತೆ ಅತಿಯಾದ ವೇಗದಿಂದ ಸಂಚರಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಅಪಘಾತದ ತಕ್ಷಣ ಮಹಿಳೆಯನ್ನು ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಸರ್ವೀಸ್ ರಸ್ತೆ ಮೂಲಕ ಸಾಗಿ ರಸ್ತೆ ಅಡ್ಡ ದಾಟಲು ವ್ಯವಸ್ಥೆಯಿದ್ದರೂ, ಇದನ್ನು ಬಿಟ್ಟು ಹೆದ್ದಾರಿಯಲ್ಲಿ ತೆರಳಿರುವುದರಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾನೂನು ಉಲ್ಲಂಘಿಸಿ ರಸ್ತೆ ದಾಟುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರ ಪ್ರತಿನಿಧಿಗಳು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

