ಕಾಸರಗೋಡು: ವಿಶ್ವ ಶುದ್ಧ ಗಾಳಿ ದಿನಾಚರಣೆಯ ಕಾಸರಗೋಡು ಜಿಲ್ಲಾಮಟ್ಟದ ಕಾರ್ಯಕ್ರಮ ಕಾಞಂಗಾಡ್ ದಕ್ಷಿಣ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿತು. ಜಿಲ್ಲಾ ಎನ್‍ಸಿಡಿ ನೋಡಲ್ ಅಧಿಕಾರಿ ಡಾ. ಪಿ. ರಂಜಿತ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪಿಟಿಎ ಅಧ್ಯಕ್ಷ ಕೆ. ಉಣ್ಣಿಕೃಷ್ಣನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕ ಎಂ.ಎ.ಅಬ್ದುಲ್ ಬಶೀರ್, ಅಪರ ಜಿಲ್ಲಾ ಮಾಸ್ ಮಿಡಿಯಾ ಅಧಿಕಾರಿ ಪಿ.ಪಿ. ಹಸೀಬ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಆರ್.ಮಂಜು, ಸಿಬ್ಬಂದಿ ಕಾರ್ಯದರ್ಶಿ ಕೆ.ಪಿ. ರಂಜಿತ್, ಹಿರಿಯ ಸಹಾಯಕಿ ಸಿ. ಶಾರದಾ ಉಪಸ್ಥಿತರಿದ್ದರು. ನಂತರ ನಡೆದ ಜಾಗೃತಿ ವಿಚಾರ ಸಂಕಿರಣದಲ್ಲಿ ಜಿಲ್ಲಾ ಎನ್‍ಸಿಡಿ ನೋಡಲ್ ಅಧಿಕಾರಿ ಡಾ. ಪಿ. ರಂಜಿತ್ ತರಗತಿ ನಡೆಸಿದರು. ಶುದ್ಧ ಗಾಳಿಯ ಮಹತ್ವವನ್ನು ಗುರುತಿಸಲು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ಉತ್ತೇಜಿಸಲು ಪ್ರತಿ ವರ್ಷ ಸೆಪ್ಟೆಂಬರ್ 7 ರಂದು ನೀಲಿ ಆಕಾಶಕ್ಕಾಗಿ ಅಂತಾರಾಷ್ಟ್ರೀಯ ಶುದ್ಧ ಗಾಳಿಯ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ವಿಶೇಷ ದಿನವನ್ನು ಘೋಷಿಸಲಾಗಿದ್ದು, ವಾಯು ಮಾಲಿನ್ಯವು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸ್ವಚ್ಛ ಪರಿಸರವನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ. ಈ ದಿನವು ವಿಶ್ವದ ವಿವಿಧ ರಾಷ್ಟ್ರಗಳನ್ನು ಒಂದುಗೂಡಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿಈ ಕಾರ್ಯಕ್ರಮದಲ್ಲಿ ವೃತ್ತಿಪರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲೆಯ ಇತರ ಸಿಬ್ಬಂದಿ ಭಾಗವಹಿಸಿದ್ದರು. ಈ ದಿನದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ನೇರ ರಸಪ್ರಶ್ನೆ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿತ್ತು.
ಶಾಲಾ ಪ್ರಾಂಶುಪಾಲ ಪಿ.ಎಸ್. ಅರುಣ್ ಸ್ವಾಗತಿಸಿದರು. ವೃತ್ತಿ ಶಿಕ್ಷಕ ಪಿ. ಸಮೀರ್ ಸಿದ್ದಿಕಿ ವಂದಿಸಿದರು.


