HEALTH TIPS

ಹೌದು ನಾವು ಆಪ್ತ ಸ್ನೇಹಿತರು... ಟ್ರಂಪ್ ಜತೆ ಮಾತನಾಡಲು ಕಾತುರನಾಗಿದ್ದೇನೆ: ಮೋದಿ

ನವದೆಹಲಿ: 'ಭಾರತ ಮತ್ತು ಅಮೆರಿಕದ ನಡುವೆ ಉತ್ತಮ ಬಾಂಧವ್ಯವಿದ್ದು, ಉಭಯ ದೇಶಗಳ ನಡುವೆ ಸ್ವಾಭಾವಿಕ ಪಾಲುದಾರಿಕೆ ಇದೆ. ಹಾಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಕಾತುರನಾಗಿದ್ದೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಭಾರತ ಮತ್ತು ಅಮೆರಿಕ ನಿಕಟ ಸ್ನೇಹಿತರು ಮತ್ತು ಸ್ವಾಭಾವಿಕ ಪಾಲುದಾರ ರಾಷ್ಟ್ರಗಳಾಗಿವೆ. ಭಾರತ-ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ಮುಂದುವರಿಯುತ್ತವೆ ಎಂಬ ವಿಶ್ವಾಸ ನನಗಿದೆ. ನಮ್ಮ ತಂಡಗಳು ವ್ಯಾಪಾರ ಒಪ್ಪಂದ ಕುರಿತಾದ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ಕೆಲಸ ಮಾಡುತ್ತಿವೆ. ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ಉಭಯ ದೇಶಗಳ ನಾಗರಿಕರಿಗೆ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ' ಎಂದು ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಅಮೆರಿಕ ದೇಶಗಳು ವ್ಯಾಪಾರ ಮಾತುಕತೆ ಕುರಿತು ಶೀಘ್ರವಾಗಿ ಅಂತಿಮ ತೀರ್ಮಾನಕ್ಕೆ ಬರಲಿವೆ. ಮುಂಬರುವ ವಾರಗಳಲ್ಲಿ ಉತ್ತಮ ಸ್ನೇಹಿತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 'ಟ್ರುತ್' ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್‌ ಕುರಿತು ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ವರ್ಷದ ಫೆಬ್ರು‌ವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಜತೆಗೆ, ರಕ್ಷಣಾ ವ್ಯವಸ್ಥೆಯ ಬಲವರ್ಧನೆ, ವಾಣಿಜ್ಯ-ವ್ಯಾಪಾರ, ಇಂಧನ, ಮೂಲಸೌಕರ್ಯ, ತಂತ್ರಜ್ಞಾನ ವೃದ್ಧಿ ಸೇರಿದಂತೆ ವ್ಯಾಪಾರ ಒಪ್ಪಂದದ ಮೊದಲ ಹಂತದ ಮಾತುಕತೆ ನಡೆಸುವ ಯೋಜನೆಯನ್ನು ಘೋಷಿಸಿದ್ದರು.

ಈಚೆಗೆ ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಬೆನ್ನಲ್ಲೇ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ಹೇರುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದರು.

ವಿನಾಯಿತಿ ಪಟ್ಟಿಯಲ್ಲಿರುವ ಕೆಲ ಸರಕುಗಳನ್ನು ಹೊರತುಪಡಿಸಿದಂತೆ, ಭಾರತದ ಮೇಲೆ ಹೇರಲಾದ ಸುಂಕದ ಪ್ರಮಾಣ ಶೇ 50ಕ್ಕೆ ಏರಿದಂತಾಗಿದೆ. ಟ್ರಂಪ್‌ ಅವರ ಈ ನಡೆಯು, ಜವಳಿ, ಸಾಗರ ಹಾಗೂ ಚರ್ಮ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದಿಂದ ಅಮೆರಿಕಕ್ಕೆ ₹7.5 ಲಕ್ಷ ಕೋಟಿ (86 ಶತಕೋಟಿ ಡಾಲರ್) ಮೌಲ್ಯದಷ್ಟು ಸರಕುಗಳ ರಫ್ತು ಆಗುತ್ತದೆ. ಹೆಚ್ಚುವರಿ ಸುಂಕ ಈ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತವು, ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಟ್ರಂಪ್‌ ದೂರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries