ನವದೆಹಲಿ: ಕೇರಳದಲ್ಲಿ ಹೆಚ್ಚುತ್ತಿರುವ ಅಮೀಬಿಕ್ ಎನ್ಸೆಫಾಲಿಟಿಸ್ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದ್ದು, ಸಾರ್ವಜನಿಕರನ್ನು ಜಾಗೃತರಾಗಿರುವಂತೆ ಒತ್ತಾಯಿಸಿದ್ದಾರೆ.
ಕೇರಳ ಸಂಕಷ್ಟದಲ್ಲಿದೆ. ನಿಂತ ನೀರಿನ ಮೂಲಗಳಲ್ಲಿ ಈಜುವುದನ್ನು ತಪ್ಪಿಸಬೇಕು ಎಂದು ಅವರು ಹೇಳಿರುವರು.
"ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ನಿಂತ ನೀರಿನ ಮೂಲಗಳಲ್ಲಿ ಈಜುವ ಮೂಲಕ ಅನೇಕ ಜನರು ವೈರಸ್‍ಗೆ ತುತ್ತಾಗಿದ್ದಾರೆ. ಬೇರೆ ಪರಿಹಾರ ಕಂಡುಕೊಳ್ಳುವವರೆಗೆ ಕೆರೆಗಳಿಗೆ ಹೋಗಬೇಡಿ ಎಂದು ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು," ಎಂದು ತರೂರ್ ಹೇಳಿದರು.
ಅಮೀಬಿಕ್ ಎನ್ಸೆಫಾಲಿಟಿಸ್ ನಿಂದ 19 ಜನರು ಸಾವನ್ನಪ್ಪಿದ ನಂತರ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಮಕ್ಕಳು ಮತ್ತು ವಯಸ್ಕರು ಸೇರಿದಂತೆ ಒಂಬತ್ತು ಜನರು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏತನ್ಮಧ್ಯೆ, ಅಮೀಬಿಕ್ ಎನ್ಸೆಫಾಲಿಟಿಸ್ ಅಥವಾ ಅಮೀಬಿಕ್ ಮೆದುಳು ಜ್ವರವು ನಿಂತ ಅಥವಾ ಹರಿಯುವ ನೀರಿನ ಮೂಲಗಳೊಂದಿಗೆ ಸಂಪರ್ಕಕ್ಕೆ ಬರುವ ಜನರಲ್ಲಿ ಕಂಡುಬರುವ ಅತ್ಯಂತ ಅಪರೂಪದ ಕಾಯಿಲೆಯಾಗಿದೆ.
ಅಮೀಬಾ ಕುಲದ ರೋಗಕಾರಕಗಳು ಮೆದುಳಿಗೆ ಸೋಂಕು ತಗುಲಿದಾಗ ಈ ರೋಗ ಸಂಭವಿಸುತ್ತದೆ. ಈ ರೋಗವು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.
ಪ್ರಾಥಮಿಕ ಲಕ್ಷಣಗಳು ತೀವ್ರ ತಲೆನೋವು, ಜ್ವರ, ವಾಕರಿಕೆ, ವಾಂತಿ, ಕುತ್ತಿಗೆ ತಿರುಗಿಸುವಲ್ಲಿ ತೊಂದರೆ ಮತ್ತು ಬೆಳಕನ್ನು ನೋಡುವಲ್ಲಿ ತೊಂದರೆ.

