ವಿಶ್ವಸಂಸ್ಥೆ : 'ಆಪರೇಷನ್ ಸಿಂಧೂರ' ಸಂದರ್ಭದಲ್ಲಿ ಯುದ್ಧ ನಿಲ್ಲಿಸುವಂತೆ ಪಾಕಿಸ್ತಾನದ ಸೇನೆ ಅಂಗಲಾಚಿತ್ತು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಹೇಳಿದೆ.
'ಇತ್ತೀಚೆಗೆ ಭಾರತದೊಂದಿಗೆ ನಡೆದ ಯುದ್ಧದಲ್ಲಿ ಪಾಕಿಸ್ತಾನ ಗೆದ್ದಿದೆ. ಪಾಕ್ ಸೇನೆಯು ಭಾರತದ ದಾಳಿಯನ್ನು ಹಿಮ್ಮೆಟ್ಟಿಸಿತು ಮತ್ತು ಈ ವೇಳೆ ಭಾರತದ ಏಳು ಯುದ್ಧವಿಮಾನಗಳು ಗುಜರಿಗೆ ಹೋಗಿವೆ' ಎಂದ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರ ಹೇಳಿಕೆಗೆ ಪ್ರತಿಯಾಗಿ ಭಾರತ ಈ ರೀತಿ ಪ್ರತ್ಯುತ್ತರ ನೀಡಿದೆ.
ಭಾರತ-ಪಾಕಿಸ್ತಾನದ ನಡುವಣ ವಿವಾದದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಮೂರನೆಯವರ ಮಧ್ಯಸ್ಥಿತಿಗೆ ಅವಕಾಶ ಇಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.
'ಪಾಕಿಸ್ತಾನದ ಪ್ರಧಾನಿ ಮತ್ತೊಮ್ಮೆ ಭಯೋತ್ಪಾದನೆಯನ್ನು ವೈಭವೀಕರಿಸಿದ ಅಸಂಬಂಧ ಕ್ಷಣಕ್ಕೆ ಸಾಮಾನ್ಯಸಭೆಯು ಸಾಕ್ಷಿಯಾಗಿದೆ. ಭಯೋತ್ಪಾದನೆಯು ಆ ದೇಶದ ವಿದೇಶಾಂಗ ನೀತಿಯ ಕೇಂದ್ರಬಿಂದು' ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಭಾರತದ ಶಾಶ್ವತ ನಿಯೋಗದ ಮೊದಲ ಕಾರ್ಯದರ್ಶಿ ಪೆಟಲ್ ಗೆಹಲೋತ್ ಶುಕ್ರವಾರ ವಾಗ್ದಾಳಿ ನಡೆಸಿದರು.
ಪಾಕಿಸ್ತಾನವು ಮೇ 9ರವರೆಗೆ ಭಾರತದ ಮೇಲೆ ದಾಳಿ ಮುಂದುವರಿಸುವ ಬೆದರಿಕೆ ಹಾಕುತ್ತಿತ್ತು. ಆದರೆ ಮೇ 10ರಂದು, ಪಾಕಿಸ್ತಾನದ ಸೇನೆಯು ಕದನ ವಿರಾಮ ಘೋಷಿಸುವಂತೆ ಅಂಗಲಾಚಿತು. ಅಷ್ಟರೊಳಗೆ ಭಾರತ ಸೇನೆಯು ಪಾಕಿಸ್ತಾನದ ಅನೇಕ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತ್ತು. ಹಾನಿ ಕುರಿತ ಫೋಟೊಗಳು ಸಾರ್ವಜನಿಕರಿಗೆ ಲಭ್ಯವಿವೆ ಎಂದು ಅವರು ಒತ್ತಿ ಹೇಳಿದರು.
'ನಿರ್ನಾಮಗೊಂಡ ರನ್‌ವೇಗಳು ಮತ್ತು ಭಗ್ನಾವಶೇಷಗೊಂಡ ಹ್ಯಾಂಗರ್‌ಗಳು (ವಿಮಾನ ನಿಲ್ಲುವ ಸ್ಥಳ) ವಿಜಯದಂತೆ ಕಾಣುತ್ತವೆಯೇ' ಎಂದು ಅವರು ವ್ಯಂಗ್ಯವಾಡಿದರು.
ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಭಯೋತ್ಪಾದನೆಯನ್ನು ಸಾರ್ವಜನಿಕವಾಗಿ ವೈಭವೀಕರಿಸುವುದಲ್ಲದೆ, ಹತರಾದ ಉಗ್ರರಿಗೆ ಅಂತಿಮ ನಮನ ಸಲ್ಲಿಸುತ್ತಾರೆ. ಭಯೋತ್ಪಾದನೆಗೆ ಇಡೀ ಆಡಳಿತ ವ್ಯವಸ್ಥೆ ಕುಮ್ಮಕ್ಕು ನೀಡುತ್ತಿದೆ ಎಂದು ಹೇಳಲು ಇದಕ್ಕಿಂತ ಪುರಾವೆ ಬೇಕೇ ಎಂದು ಅವರು ಹೇಳಿದರು.
- ಪೆಟಲ್ ಗೆಹಲೋತ್ ಭಾರತದ ಶಾಶ್ವತ ನಿಯೋಗ ಮೊದಲ ಕಾರ್ಯದರ್ಶಿಭಾರತ-ಪಾಕಿಸ್ತಾನ ನಡುವಣ ವಿವಾದವನ್ನು ದ್ವಿಪಕ್ಷೀಯವಾಗಿಯೇ ಪರಿಹರಿಸಿಕೊಳ್ಳಲು ಬಹಳ ಹಿಂದಿನಿಂದಲೂ ಉಭಯ ದೇಶಗಳು ಒಪ್ಪಿಕೊಂಡಿವೆ. ಇಲ್ಲಿ ಮೂರನೆಯವರಿಗೆ ಅವಕಾಶ ಇಲ್ಲ.
ಯಾವುದೇ ರೀತಿ ನಾಟಕ ಅಥವಾ ಸುಳ್ಳುಗಳಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದರು.
ಭಯೋತ್ಪಾದನೆ ಮತ್ತು ಅದರ ಪ್ರಾಯೋಜನೆಯ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಪರಮಾಣು ಬೆದರಿಕೆಯಡಿಯಲ್ಲಿ ಭಯೋತ್ಪಾದನೆಗೆ ಭಾರತ ಅವಕಾಶ ನೀಡುವುದಿಲ್ಲ. ಇಂಥ ಗೊಡ್ಡು ಬೆದರಿಕೆಗಳಿಗೆ ಭಾರತ ಹೆದರುವುದಿಲ್ಲ. ಜಗತ್ತಿಗೆ ಭಾರತದ ಸಂದೇಶ ಸ್ಪಷ್ಟವಾಗಿದೆ. ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದರು.
ಟ್ರಂಪ್ ಹೊಗಳಿದ ಶರೀಫ್
ದಿಟ್ಟ ಮತ್ತು ದೂರದರ್ಶಿ ನಾಯಕತ್ವದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಭಾರತ-ಪಾಕಿಸ್ತಾನ ಮಧ್ಯೆ ಕದನವಿರಾಮ ಘೋಷಣೆಯಾಯಿತು. ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ ಅಮೆರಿಕ ಅಧ್ಯಕ್ಷರು ಮತ್ತು ಅವರ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ವಿಶ್ವಸಂಸ್ಥೆಯಲ್ಲಿ ಹೇಳಿದರು.

