ಚಂಡೀಗಢ: ಅಮೃತಸರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭೇಟಿ ನೀಡಿದ್ದು, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.
ಅಮೃತಸರದ ಅಜ್ನಾಲಾದ ಘೋನೆವಾಲ ಗ್ರಾಮಕ್ಕೆ ತೆರಳಿದ ಅವರು, ಪ್ರವಾಹ ಪೀಡಿತ ಜನರನ್ನು ಭೇಟಿಯಾಗಿ ಹಾನಿಯ ಬಗ್ಗೆ ವಿಚಾರಿಸಿದ್ದಾರೆ.
ಅವರೊಂದಿಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಅಮೃತಸರ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಮತ್ತು ಪಕ್ಷದ ಇತರ ನಾಯಕರು ಇದ್ದರು.
ಪಂಜಾಬ್ ದಶಕಗಳಲ್ಲಿಯೇ ಅತ್ಯಂತ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಉಂಟಾಗಿದೆ.
ಪ್ರವಾಹದಿಂದಾಗಿ ರಾಜ್ಯದಲ್ಲಿ ಸುಮಾರು 56 ಜನ ಮೃತಪಟ್ಟಿದ್ದಾರೆ. 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿವೆ.

