ನವದೆಹಲಿ: 'ಅತ್ಯಂತ ಪ್ರತಿಷ್ಠಿತ ಜೈಪುರ ಸಾಹಿತ್ಯೋತ್ಸವವು 2026ರ ಜನವರಿ 15ರಿಂದ 19ರವರೆಗೆ ನಡೆಯಲಿದೆ. '19ನೇ ಆವೃತ್ತಿಯ ಈ ಉತ್ಸವದಲ್ಲಿ ಬುಕರ್ ಪ್ರಶಸ್ತಿ ವಿಜೇತೆ ಕರ್ನಾಟಕದ ಬಾನು ಮುಷ್ತಾಕ್ ಸೇರಿದಂತೆ ಸುಮಾರು 350 ಅತಿಥಿಗಳು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ' ಎಂದು ಉತ್ಸವದ ಆಯೋಜಕರು ಸೋಮವಾರ ತಿಳಿಸಿದರು.
ಜೈಪುರದ ಕ್ಲಾರ್ಕ್ಸ್ ಹೋಟೆಲ್‌ನಲ್ಲಿ ಉತ್ಸವ ನಡೆಯಲಿದೆ. ಕಾರ್ಯಕ್ರಮವನ್ನು 'ಟೀಮ್‌ವರ್ಕ್ಸ್ ಆರ್ಟ್' ಮತ್ತು 'ವೇದಾಂತ' ಸಂಸ್ಥೆ ಆಯೋಜಿಸುತ್ತಿದೆ. ಎಂದಿನಂತೆ ಈ ಬಾರಿಯೂ ಜೈಪುರ ಬುಕ್‌ಮಾರ್ಕ್ ಉತ್ಸವ ನಡೆಯಲಿದೆ. ಇದು 13ನೇ ಆವೃತ್ತಿಯದ್ದಾಗಿದೆ.
'ಕವಿತೆ, ಕಥೆಗಳು, ಇತಿಹಾಸ, ಕಲೆ, ವಿಜ್ಞಾನ, ಗಣಿತ, ವೈದ್ಯಕೀಯ, ಮಾನಸಿಕ ಆರೋಗ್ಯ, ಹವಾಮಾನ ವೈಪರಿತ್ಯ, ಜಾಗತಿಕ ರಾಜಕಾರಣ, ಸಂಘರ್ಷಗಳು, ಲಿಂಗ, ಅನುವಾದ, ಸಿನಿಮಾ, ಜನಾಂಗಗಳು, ವ್ಯಕ್ತಿಯ ಅಸ್ಮಿತೆ ಕುರಿತು ಚರ್ಚೆಗಳು ನಡೆಯಲಿವೆ' ಎಂದು ಆಯೋಜಕರು ಮಾಹಿತಿ ನೀಡಿದರು.
ಮಾಜಿ ರಾಯಭಾರಿ ಮತ್ತು ಲೇಖಕ ಗೋಪಾಲಕೃಷ್ಣ ಗಾಂಧಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪೋಲೆಂಡ್ ಬರಹಗಾರ್ತಿ ಒಗಾ ಟುಕಾರ್ಚುಕ್, ಚೆಸ್ ದೈತ್ಯ ವಿಶ್ವನಾಥನ್ ಆನಂದ್, ಬ್ರಿಟನ್‌ನ ನಟ ಮತ್ತು ಲೇಖಕ ಸ್ಟೀಫನ್ ಫ್ರೈ, ಚಿಂತಕಿ ಅನುರಾಧಾ ರಾಯ್, ಸಿನಿಮಾ ವಿಮರ್ಶಕಿ ಭಾವನಾ ರಾಮಯ್ಯ, ಲೇಖಕರಾದ ಮನು ಜೋಸೆಫ್, ರುಚಿರ್ ಜೋಶಿ, ಕೆ.ಆರ್. ಮೀರಾ, ಕಾದಂಬರಿಗಾರ್ತಿ ಶೋಭಾ ಡೇ ಸೇರಿದಂತೆ ದೇಶ-ವಿದೇಶಗಳಿಂದಲೂ ಲೇಖಕರು ಪಾಲ್ಗೊಳ್ಳಲಿದ್ದಾರೆ.

