ರಾಂಚಿ: 2040ರಲ್ಲಿ ಚಂದ್ರನ ಮೇಲೆ ಭಾರತೀಯರನ್ನು ಇಳಿಸುವ ಗುರಿಯಿದ್ದು, ಅದರ ಭಾಗವಾಗಿ ನಡೆಸಲಾಗುವ ಮೊದಲ ಮಾನವ ಬಾಹ್ಯಾಕಾಶ ಹಾರಾಟ 'ಮಿಷನ್ ಗಗನಯಾನ' 2027ರಲ್ಲಿ ಉಡಾವಣೆಯಾಗುವ ಹಾದಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ವಿ.ನಾರಾಯಣನ್ ಬುಧವಾರ ಹೇಳಿದ್ದಾರೆ.
2035ರ ವೇಳೆಗೆ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು 2026ರ ವೇಳೆಗೆ ಮಾವನ ರಹಿತ ಮೂರು 'ಗಗನಯಾನ' ಕಾರ್ಯಾಚರಣೆಗಳು ಸೇರಿದಂತೆ ಹಲವಾರು ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳು, ವಲಯ ಸುಧಾರಣೆಗಳು ಪ್ರಸ್ತುತ ನಡೆಯುತ್ತಿವೆ ಎಂದು ನಾರಾಯಣನ್ ಹೇಳಿದ್ದಾರೆ.
ಇದರಲ್ಲಿ 'ವ್ಯೋಮಮಿತ್ರ' ರೋಬೋಟ್ ಅನ್ನು ಒಳಗೊಂಡಿರುವ ಮೊದಲನೆಯ ಯೋಜನೆಯನ್ನು 2025ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ.
'ಪ್ರಧಾನಿ ನರೇಂದ್ರ ಮೋದಿ ಅವರು 2040ರ ವೇಳೆಗೆ ಸ್ಥಳೀಯ ಸಿಬ್ಬಂದಿಯೊಂದಿಗೆ ಚಂದ್ರಯಾನಕ್ಕೆ ಮಾರ್ಗಸೂಚಿ ನೀಡಿದ್ದಾರೆ. ಅದರ ಅಡಿಯಲ್ಲಿ ನಾವು ಭಾರತೀಯರನ್ನು ಚಂದ್ರನ ಮೇಲೆ ಇಳಿಸಿ ಸುರಕ್ಷಿತವಾಗಿ ಮರಳಿ ತರಬೇಕಿದೆ. ಅಲ್ಲದೆ, ಶುಕ್ರ ಗ್ರಹವನ್ನು ಅಧ್ಯಯನ ನಡೆಸಲು ವೀನಸ್ ಆರ್ಬಿಟರ್ ಮಿಷನ್ (ವಿಒಎಂ) ಅನ್ನು ಕೂಡಾ ಅನುಮೋದಿಸಲಾಗಿದೆ' ಎಂದು ಅವರು ಪಿಟಿಐಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

