ಕಾಸರಗೋಡು: ಉಡುಪಿ-ಕರಿಂದಳಂ 400 ಕೆ.ವಿ. ಮಾರ್ಗ ಕಾಮಗಾರಿಗೆ ಸಂಬಂಧಿಸಿದ ಪರಿಹಾರಕ್ಕಾಗಿ ಸರ್ಕಾರ ಸಮಗ್ರ ಪ್ಯಾಕೇಜ್ ಅನ್ನು ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದ ಆದೇಶವನ್ನು ಶೀಘ್ರದಲ್ಲೇ ಹೊರಡಿಸುವ ಬಗ್ಗೆ ರಾಜ್ಯ ಇಂಧನ ಖಾತೆ ಸಚಿವ ಕೃಷ್ಣನ್ ಕುಟ್ಟಿ ವಿಧಾನಸಭೆಯಲ್ಲಿ ನೀಡಿರುವ ಮಾಹಿತಿಯಿಂದ ಭೂಮಿ ಕಳೆದುಕೊಳ್ಳುವವರಲ್ಲಿ ಒಂದಷ್ಟು ಆಶಾಭಾವನೆ ಮೂಡಿಸಿದೆ.
ಕೇರಳ ರಾಜ್ಯ ಮತ್ತು ವಿಶೇಷವಾಗಿ ಉತ್ತರ ಕೇರಳದಲ್ಲಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ವಿದ್ಯುತ್ ಪ್ರಾಧಿಕಾರವು ಉಡುಪಿ-ಕಾಸರಗೋಡು ಮತ್ತು ಕಾಸರಗೋಡು-ವಯನಾಡು ಎಂಬ ಎರಡು ಯೋಜನೆಗಳಿಗೆ ಅನುಮೋದನೆ(ಸಿಇಎ) ಅನುಮೋದನೆ ನೀಡಿದೆ. ಕೇಂದ್ರ ಇಂಧನ ಸಚಿವಾಲಯವು ಉಡುಪಿ-ಕರಿಂದಳಂ (ಕಾಸರ್‍ಗೋಡ್) 400 ಕೆವಿ ಅಂತಾರಾಜ್ಯ ಪ್ರಸರಣ ಮಾರ್ಗ ಯೋಜನೆಗೆ ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ (ಟಿಬಿಸಿಬಿ) ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನಿರ್ಮಾಣ ಕಾರ್ಯವನ್ನು ಮೆಸರ್ಸ್ ಸ್ಟರ್ಲೈಟ್ ಪವರ್ ಟ್ರಾನ್ಸ್‍ಮಿಷನ್ ಲಿಮಿಟೆಡ್‍ಗೆ ವಹಿಸಿಕೊಡಲಾಗಿದೆ. ಪ್ರಸ್ತಾವಿತ 400 ಕೆವಿ ಉಡುಪಿ-ಕರಿಂದಳಂ ಮಾರ್ಗವು ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ ಸಾಗಿ(ಕರ್ನಾಟಕದೊಳಗೆ 68 ಕಿ.ಮೀ) ಕೇರಳದ ಕಾಸರಗೋಡು ಜಿಲ್ಲೆಯ ಮೂಲಕ(ಕೇರಳದ ಒಳಗೆ 47 ಕಿ.ಮೀ)ಹಾದುಹೋಗಲಿದೆ.
ಕೇರಳ ರಾಜ್ಯ ವಿದ್ಯುತ್ ಮಂಡಳಿ ನಿಯಮಿತ(ಕೆಎಸ್‍ಇಬಿಎಲ್) ಉಡುಪಿ-ಕಾಸರಗೋಡು 400 ಕೆವಿ ಮಾರ್ಗದ ಮುಂದುವರಿಕೆಯಾಗಿ ಕಾಸರಗೋಡು-ವಯನಾಡ್ 400ಕೆ.ವಿ ಪ್ರಸರಣ ಮಾರ್ಗವನ್ನು ನಿರ್ಮಿಸುತ್ತಿದೆ. ಕೇಂದ್ರ ವಿದ್ಯುತ್ ಪ್ರಾಧಿಕಾರವು ಉಡುಪಿ-ಕಾಸರಗೋಡು ಪ್ರಸರಣ ಕಂಪನಿ ಲಿಮಿಟೆಡ್(ಯುಕೆಟಿಎಲ್‍ಗೆ 400 ಕೆವಿ ಮಾರ್ಗ ಯೋಜನೆಯನ್ನು (ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್) 400 ಕೆವಿ ಮಾರ್ಗದ ನಿರ್ಮಾಣದೊಂದಿಗೆ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಟ್ಟಿದೆ.
ಕಾಸರಗೋಡು ಜಿಲ್ಲೆಯಲ್ಲಿ ಸಂಬಂಧಿತ ಪರಿಹಾರ ಪ್ಯಾಕೇಜ್ ರಚಿಸುವ ವಿಷಯದ ಕುರಿತು ವಿವಿಧ ಹಂತಗಳಲ್ಲಿ ನಡೆದ ಚರ್ಚೆಗಳ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.
ಹೀಗಿರಲಿದೆ ಪರಿಹಾರ:
ಗೋಪುರ ಸ್ಥಾಪನೆಗೆ ಸಂಬಂಧಿಸಿ ಭೂಮಿಗೆ ಪರಿಹಾರ ಕಲ್ಪಿಸುವ ಸಂದರ್ಭ ಭೂಮಿಯ ನ್ಯಾಯಯುತ ಮೌಲ್ಯದ 4 ಪಟ್ಟು ಹೆಚ್ಚಿನ ಮೊತ್ತ ನೀಡುವುದು, ವಿದ್ಯುತ್ ಲೈನ್ ಹಾದುಹೋಗುವ ಭೂಮಿಯ ನ್ಯಾಯಯುತ ಮೌಲ್ಯದ ಶೇ.60ರಷ್ಟು ಹಚ್ಚು ಮೊತ್ತ ಮಂಜೂರು ಮಾಡುವುದು, ನಷ್ಟಪರಿಹಾರ ಮಂಜೂರುಗೊಳಿಸುವ ವೇಳೆ ಸೆಂಟ್‍ಗೆ ಕನಿಷ್ಠ ಏಳು ಸಾವಿರ ರೂ.ನಿಗದಿಪಡಿಸುವುದು, ಮರ ಕಡಿಯಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ಮೊತ್ತ ಮಂಜೂರುಗೊಳಿಸಲಾಗುವುದು, ವಿದ್ಯುತ್‍ಲೈನ್ ಹಾದುಹೋಗುವ ಅಂಚಿಗಿರುವ ಮನೆಗಳಿಗೆ 2ಲಕ್ಷ ರೂ. ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.

