ಕಾಸರಗೋಡು: ತ್ರಿಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದಿಂದ 16 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿರುವ ಬಗ್ಗೆ ವರದಿ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಮೌನಪಾಲಿಸಿರುವುದು ಖಂಡನೀಯ ಎಂದು ಬಿಜೆಪಿ ಕೋಯಿಕ್ಕೋಡ್ ವಲಯ ಸಮಿತಿ ಅಧ್ಯಕ್ಷ, ವಕೀಲ ಕೆ. ಶ್ರೀಕಾಂತ್ ತಿಳಿಸಿದ್ದಾರೆ.
ದೇವಾಲಯದ ಚಿನ್ನದ ಆಭರಣಗಳು ಕಳೆದುಹೋಗಿರುವ ಬಗ್ಗೆ ಮಾಹಿತಿ ಲಭಿಸಿದ್ದರೂ, ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಮುಜರಾಯಿ ಇಲಾಖೆಯ ಗಂಭೀರ ಲೋಪವಾಗಿದೆ. ಎಡ ಪಕ್ಷ ಬೆಂಬಲಿತ ಕಾರ್ಯನಿರ್ವಾಹಕ ಅಧಿಕಾರಿಯ ಕಾಲಾವಧಿಯಲ್ಲಿ ಚಿನ್ನ ಕಳವಾಗಿದ್ದು, ಕಳವು ಕೃತ್ಯದಲ್ಲಿ ಶಾಮೀಲಾಗಿರುವವರನ್ನು ಬಂಧಿಸಲು ಮುಂದಾಗದಿರುವುದು ಸಂಶಯಕ್ಕೆ ಕಾರಣವಾಗಿದೆ. ಚಿನ್ನ ಕಳವು ನಡೆಸಿದವರ ರಕ್ಷಣೆಗೆ ದೇವಸ್ವಂ ಮಂಡಳಿ ಬೆಂಗಾವಲಾಗಿರುವುದಾಗಿ ಆರೋಪಿಸಿದರು.
ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಾಲಯಗಳ ಚಿನ್ನದ ಆಭರಣ, ಆದಾಯ ಮತ್ತು ವೆಚ್ಚದ ಬಗ್ಗೆ ಆಡಿಟ್ ನಡೆಸಿ ಇದನ್ನು ಬಹಿರಂಗಪಡಿಸಬೇಕು. ಅದು ಭಕ್ತರ ಹಕ್ಕು ಕೂಡಾ ಆಗಿದೆ. ಆಡಿಟ್ ವರದಿಯಲ್ಲಿ ಚಿನ್ನ ಕಳವು ಬಗ್ಗೆ ಮಾಹಿತಿ ಹೊರಬಂದಿದ್ದರೂ, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಆಡಳಿತ ಪಕ್ಷದ ಮುಖಂಡರ ಅಭಯಹಸ್ತವಿರುವುದು ಇದರಿಂದ ಸಾಬೀತಾಗುತ್ತಿದೆ ಎಂದು ಶ್ರೀಕಾಂತ್ ಆರೋಪಿಸಿದರು.

