ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಕವಚದಲ್ಲಿನ ಚಿನ್ನ ಕಳವು (ನಷ್ಟ) ಪ್ರಕರಣದಲ್ಲಿ ದೇವಸ್ಥಾನ ಮಂಡಳಿಯ ಜಾಗೃತಿ ವಿಭಾಗದ ತನಿಖೆಯಲ್ಲಿ ಉಲ್ಲೇಖಿಸಲ್ಪಟ್ಟ 9 ಅಧಿಕಾರಿಗಳ ವಿರುದ್ಧ ಲೋಪ ಎಸಗಿದ ಆರೊಪದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಶನಿವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್, ಒಂಬತ್ತು ಅಧಿಕಾರಿಗಳ ಕಡೆಯಿಂದಾದ ಲೋಪಗಳನ್ನು ಗುರುತಿಸಲಾಗಿದೆ. ದೇವಸ್ವಂ ಉಪ ಆಯುಕ್ತ (Haripad) ಬಿ.ಮುರಾರಿ ಬಾಬು ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಉಳಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅಕ್ಟೋಬರ್ 14ರಂದು ನಡೆಯುವ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ತಿರುವಾಂಕೂರು ದೇವಸ್ವಂ ಮಂಡಳಿಯ ಕಾರ್ಯದರ್ಶಿ ಜಯಶ್ರೀ, ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್, ಆಡಳಿತ ಅಧಿಕಾರಿ ಶ್ರೀಕುಮಾರ್ ಮತ್ತು ತಿರುವಾಭರಣಂ ಮಾಜಿ ಆಯುಕ್ತ ಕೆ.ಎಸ್. ಬೈಜು ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಏನಿದು ಪ್ರಕರಣ
ಶಬರಿಮಲೆ ಅಯ್ಯಪ್ಪ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಕವಚಕ್ಕೆ ಚಿನ್ನದ ಮರು ಲೇಪನ ಮಾಡಲು ಪ್ರಾಯೋಜಕರಾದ ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್ ಪೋಟಿ 474.9 ಗ್ರಾಂನಷ್ಟು ಚಿನ್ನವನ್ನು ಹಸ್ತಾಂತರಿಸಿದ್ದರು. ಚಿನ್ನ ಲೇಪನದ ಬಳಿಕ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾಗಿದೆ ಎಂಬುವುದು ಗುಪ್ತಚರ ವರದಿಯಲ್ಲಿ ಬಹಿರಂಗಗೊಂಡಿದೆ.
ಚಿನ್ನದ ಕಳವು ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ಶುಕ್ರವಾರ ಸೂಚಿಸಿದೆ. ಇದುವರೆಗಿನ ತನಿಖೆಯನ್ನು ಗಮನಿಸಿದಾಗ, ದ್ವಾರಪಾಲಕ ಮೂರ್ತಿಗಳ ಕವಚದ ಚಿನ್ನ ಲೇಪನ ಕಾರ್ಯದಲ್ಲಿ ಚಿನ್ನದ ದುರುಪಯೋಗ ಆಗಿರುವುದು ಕಂಡುಬಂದಿದೆ ಎಂದು ನ್ಯಾಯಮೂರ್ತಿಗಳಾದ ರಾಜ ವಿಜಯರಾಘವನ್ ವಿ ಮತ್ತು ಕೆ.ವಿ ಜಯಕುಮಾರ್ ಅವರ ಪೀಠವು ಅಭಿಪ್ರಾಯಪಟ್ಟಿದೆ.

