HEALTH TIPS

ಬಿಹಾರ ಕದನ ಕಣ: ಪೈಜಾಮ, ಕುರ್ತಾಗೆ ಹೆಚ್ಚಿದ ಬೇಡಿಕೆ, ದರ್ಜಿಗಳಿಗೆ ದುಂಬಾಲು

ಪಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆ ಆಕಾಂಕ್ಷಿಗಳು, ರಾಜಕೀಯ ಆಸಕ್ತರು ಚುನಾವಣಾ ಅಖಾಡಕ್ಕೆ ಧುಮುಕುವ ಮೊದಲು ಹೊಸ ದಿರಿಸಿಗಾಗಿ ಮುಗಿಬಿದ್ದಿದ್ದಾರೆ. ಇದರ ಪರಿಣಾಮ ದರ್ಜಿಗಳು ಬಿಡುವಿಲ್ಲದ ಕೆಲಸದಲ್ಲಿ ನಿರತರಾಗಿದ್ದಾರೆ.

ಪಟ್ನಾದ ಬೀರ್‌ಚಂದ್‌ ಪಟೇಲ್ ರಸ್ತೆಯಲ್ಲಿ ರಾತ್ರಿ, ಹಗಲು ಒಂದಾಗಿದೆ. ಬಿಜೆಪಿ, ಜೆಡಿಯು, ಆರ್‌ಜೆಡಿ ಮತ್ತು ಸಿಪಿಐ ಕಚೇರಿಗಳು ಇದೇ ರಸ್ತೆಯಲ್ಲಿವೆ. ರಾಜಕೀಯ ಚಟುವಟಿಕೆಗಳು ಇಲ್ಲಿ ಬಿರುಸುಗೊಂಡಿವೆ. ರಾಜಕಾರಣಿಗಳು, ಕಾರ್ಯಕರ್ತರು, ಮಾಧ್ಯಮದವರಿಂದ ಇಡೀ ರಸ್ತೆಯೇ ತುಂಬಿ ತುಳುಕುತ್ತಿದೆ.

ಇಲ್ಲಿ ಚುನಾವಣಾ ರಂಗೇರುತ್ತಿದ್ದಂತೆ, ತರಹೇವಾರಿ ಚುನಾವಣಾ ದಿರಿಸಿಗಾಗಿ ವಸ್ತ್ರ ಭಂಡಾರಗಳು ಮತ್ತು ಟೈಲರ್‌ಗಳಿಗೆ ಕೈತುಂಬಾ ಕೆಲಸವಾಗಿದೆ.

ಬೀದಿ ಬದಿಯ ಕುರ್ತಾ, ಪೈಜಾಮಾ ಹೊಲಿಯುವ ಅಂಗಡಿಗಳು ಒಂದೊಂದು ಒಂದೊಂದು ಕಥೆಗಳನ್ನು ಹೇಳುತ್ತವೆ. ಜತೆಗೆ ಬಿಹಾರದ ಪರಂಪರೆಯನ್ನು ಸಾರುತ್ತವೆ.

'ಕಳೆ 40 ವರ್ಷಗಳಿಂದ ಇಲ್ಲಿ ಹೊಲಿಗೆ ಕೇಂದ್ರವನ್ನು ಹೊಂದಿದ್ದೇವೆ. ನಮ್ಮ ಅಜ್ಜ, ನಂತರದಲ್ಲಿ ನಮ್ಮ ತಂದೆ ಇಲ್ಲಿ ಕೂತು ಕುರ್ತಾ, ಪೈಜಾಮಾ ಹೊಲಿಯುತ್ತಿದ್ದರು. ಆಗ ಬೆಡಿಕೆಯೂ ಹೆಚ್ಚಿತ್ತು. ಈಗ ಕಾಲ ಬದಲಾದರೂ ಚುನಾವಣೆಗಾಗಿ ಕುರ್ತಾ, ಪೈಜಾಮಾ ಹಾಕುವವರ ಸಂಖ್ಯೆಗೇನೂ ಕಡಿಮೆ ಇಲ್ಲ' ಎಂದು ತಮ್ಮ ಅನುಭವವನ್ನು ಅಫ್ತಾಬ್ ಖಾನ್ ನೆನಪಿಸಿಕೊಂಡರು.

ಓಲ್ಡ್‌ ಎಂಎಲ್‌ಎ ಫ್ಲಾಟ್ಸ್‌ ಬಳಿ ಕಳೆದ 70 ವರ್ಷಗಳಿಂದ ಹೊಲಿಗೆ ಅಂಗಡಿಯನ್ನು ಹೊಂದಿರುವುದಾಗಿ ಮತ್ತೊಬ್ಬ ಟೈಲರ್ ಹೇಳಿದ್ದಾರೆ. ಅದನ್ನು ಈಗ ಕೆಡವಿ, ಹೊಸದಾಗಿ ನಿರ್ಮಿಸಲಾಗಿದೆ. ಅಲ್ಲಿ ಈಗ ಹೆಚ್ಚು ಸ್ಥಳವಿಲ್ಲದಿದ್ದರೂ, ನಮ್ಮ ವ್ಯಾಪಾರ ಉತ್ತಮವಾಗಿ ಸಾಗುತ್ತಿದೆ ಎಂದಿದ್ದಾರೆ.

'ಈ ವೃತ್ತಿಯ ಮೂಲಕವೇ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇನೆ. ನಾಲ್ವರು ಹೆಣ್ಣುಮಕ್ಕಳ ಮದುವೆ ಮಾಡಿದ್ದೇನೆ. ಕುಟುಂಬವೂ ಉತ್ತಮವಾಗಿದೆ' ಎಂದು ಟೈಲರ್ ವೃತ್ತಿಯನ್ನೇ ಮುಂದುವರಿಸಿಕೊಂಡು ಬರುತ್ತಿರುವ ಅನ್ಸಾರಿ ಹೇಳಿದ್ದಾರೆ.

'ನಾವು ರಾಜಕಾರಣಿಗಳಿಗೆ ಹೊಸ ರೂಪ ನೀಡುತ್ತಲೇ ಬಂದಿದ್ದೇವೆ. ಇವರಲ್ಲಿ ರಾಜಕಾರಣಕ್ಕೆ ಧುಮುಕುತ್ತಿರುವವರಿಂದ ಹಿಡಿದು, ಮಂತ್ರಿಗಳಿಗೂ ಕುರ್ತಾ, ಪೈಜಾಮ ಹೊಲೆದು ಕೊಡುತ್ತಿದ್ದೇವೆ. ಆದರೆ ಜನಪ್ರಿಯತೆ ಪಡೆಯುತ್ತಿದ್ದಂತೆ ಅವರು ಇಲ್ಲಿಂದ, ದೊಡ್ಡ ಮಳಿಗೆಗಳತ್ತ ಮುಖ ಮಾಡುತ್ತಾರೆ' ಎಂದು ತಮ್ಮ ನೋವು, ನಲಿವನ್ನು ಹಂಚಿಕೊಂಡಿದ್ದಾರೆ.

ಆರ್‌ಜೆಡಿಯ ಟಿಕೆಟ್ ಆಕಾಂಕ್ಷಿ ನೌಶೆರ್ ಭಾಯ್‌ ಅವರು ಈಗಾಗಲೇ ಮೂರು ಜೊತೆ ಕುರ್ತಾ ಪೈಜಾಮಕ್ಕಾಗಿ ಇಲ್ಲಿ ಹೇಳಿದ್ದಾರೆ. ಎಲ್ಲವೂ ಭಿನ್ನ ಬಣ್ಣದವು. ಬಿಜೆಪಿ ಕಾರ್ಯಕರ್ತ ಸಂಜಯ್ ಕುಮಾರ್ ಮಿಶ್ರಾ ಅವರೂ ಇದೇ ರಸ್ತೆಯ ಮತ್ತೊಂದು ಅಂಗಡಿಯಲ್ಲಿ ತರಹೇವಾರಿ ಬಣ್ಣಗಳ ಕುರ್ತಾಗಾಗಿ ಮುಂಗಡ ನೀಡಿದ್ದಾರೆ. ಭಾರತೀಯ ಮಜ್ದೂರ್ ಸಂಘದ ಬಲರಾಮ್ ಪಾಂಡೇ ಅವರು ಹೊಸ ಬಗೆಯ ಪಟ್ಟಿ ವಿನ್ಯಾಸ ಕುರ್ತಾಗೆ ಹೇಳಿದ್ದಾರೆ.

ಬಿಹಾರದಲ್ಲಿ ಚುನಾವಣಾ ಕಣದ ರಂಗೇರುತ್ತಿದ್ದಂತೆ ಬಗೆಬಗೆಯ ಕುರ್ತಾಗಳಿಗೆ ಬೇಡಿಕೆಯೂ ಹೆಚ್ಚಾಗಿದೆ ಎಂದು ಟೈಲರ್‌ಗಳು ಹೇಳುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries