HEALTH TIPS

ಥಾಯ್ಲೆಂಡ್ ಮಾಜಿ ರಾಣಿ, ರಾಜಮಾತೆ ಸಿರಿಕಿತ್ ಇನ್ನಿಲ್ಲ

 ಥಾಯ್ಲೆಂಡ್ :ಥಾಯ್ಲೆಂಡ್ ಮಾಜಿ ರಾಣಿ, ರಾಜಮಾತೆ ಸಿರಿಕಿತ್ ಕಿತಿಯಾಕಾರ್ ಅವರು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ರಕ್ತದ ಸೋಂಕು ಹಾಗೂ ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಅಕ್ಟೋಬರ್ 24 ರಂದು ಸಂಜೆ 9 ಗಂಟೆಗೆ ಅರಮನೆಯಲ್ಲಿ ನಿಧನರಾದರು ಎಂದು ಬ್ಯಾಂಕಾಕ್ ಅರಮನೆ ಪ್ರಕಟಣೆ ತಿಳಿಸಿದೆ. 1932 ರಲ್ಲಿ ಜನಿಸಿದ್ದ ರಾಣಿ ಸಿರಿಕಿತ್, ಬರೋಬ್ಬರಿ 66 ವರ್ಷ ಥಾಯ್ಲೆಂಡ್ ರಾಣಿಯಾಗಿ ಮೆರೆದಿದ್ದರು. 


ಸಿರಿಕಿತ್ ಅವರು ಥಾಯ್ಲೆಂಡ್‌ನ ರಟ್ಟನಕೋಸಿನ್ ಸಾಮ್ಯಾಜ್ಯದ ಪ್ರಸ್ತುತ ಚಕ್ರಿ ರಾಜಮನೆತನದ 9ನೇ ರಾಜ ಭೂಮಿಬೋಲ್ ಅತುಲ್ಯದೇವ್ ಅವರನ್ನು 1950 ರಲ್ಲಿ ವರಿಸಿದ್ದರು. ಆ ಮೂಲಕ ಥಾಯ್ಲೆಂಡ್ ರಾಣಿ ಪಟ್ಟ ಏರಿದ್ದರು.

ರಟ್ಟನಕೋಸಿನ್ ಸಾಮ್ರಾಜ್ಯದ ಸಾಮಂತ ಅರಸರಾಗಿದ್ದ ಚಂತಾಭುರಿ ರಾಜಮನೆತನದ ಎರಡನೇ ರಾಜ ನಖ್ಖತ್ರ ಮಂಗಳ ಅವರ ಮೂರನೇ ಮಗಳೇ ರಾಣಿ ಸಿರಿಕಿತ್. ಸಿರಿಕಿತ್ ಅವರು ಪ್ಯಾರಿಸ್‌ನಲ್ಲಿ ಸಂಗೀತ ಕಲಿಯುವಾಗ ಅಪಘಾತವೊಂದರ ವೇಳೆ ಭೂಮಿಬೋಲ್ ಅತುಲ್ಯದೇವ್ ಅವರನ್ನು ಭೇಟಿಯಾಗಿ ಅವರ ಜೊತೆ ಪ್ರೇಮಾಂಕುರವಾಗಿತ್ತು.

2012ರಲ್ಲಿ ಸಿರಿಕಿತ್ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದರು. ಅನಾರೋಗ್ಯದ ಕಾರಣದಿಂದ 2016ರಲ್ಲಿ ರಾಣಿ ಪದವಿ ತೊರೆದು ವಿಶ್ರಾಂತಿಯಲ್ಲಿದ್ದರು. ಅದೇ ವರ್ಷವೇ ರಾಜ ಭೂಮಿಬೋಲ್ ಅತುಲ್ಯದೇವ್ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

ಸಿರಿಕಿತ್ ಥಾಯ್ಲೆಂಡ್ ರಾಣಿಯಾಗಿ 66 ವರ್ಷಗಳ ಅವಧಿಯಲ್ಲಿ ರಾಜಪ್ರಭುತ್ವ ಮತ್ತು ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡಿದರು. ಪ್ರಜೆಗಳನ್ನು ಮಕ್ಕಳಂತೆ ಕಂಡರು. ಅದಕ್ಕಾಗಿಯೇ ಥಾಯ್ಲೆಂಡ್‌ನಲ್ಲಿ 1976 ರಿಂದ ಅವರ ಹುಟ್ಟುಹಬ್ಬ ಆಗಸ್ಟ್ 12 ರ ಪ್ರಯುಕ್ತ 'ತಾಯಂದಿರ ದಿನ'ವನ್ನಾಗಿ ಆಚರಿಸಲಾಗುತ್ತದೆ.

ಸುಸ್ಥಿರ ಅಭಿವೃದ್ಧಿಗೆ ಒತ್ತು ಕೊಡುವುದರ ಜೊತೆ, ಮಹಿಳೆಯರಿಗೂ ಸಮಾನವಾದ ಶಿಕ್ಷಣ, ಹಕ್ಕುಗಳು ಹಾಗೂ ಪರಿಸರ, ಕಲೆ-ಸಂಗೀತಕ್ಕೆ ಅವರು ವಿಶೇಷ ಕೊಡುಗೆ ನೀಡಿದ್ದರು. ಸ್ವತಃ ಅವರು ಸಂಗೀತಗಾರ್ತಿಯಾಗಿದ್ದರು. ವಿರೋಧಿಗಳನ್ನೂ ಅವರು ಮಕ್ಕಳಂತೆ ಕಾಣುತ್ತಿದ್ದರು ಎಂದು ಬಿಬಿಸಿ ಸುದ್ದಿ ವೆಬ್‌ಸೈಟ್ ಸಂದಶರ್ನವೊಂದನ್ನು ಸ್ಮರಿಸಿ ವರದಿ ಮಾಡಿದೆ.

ಬ್ಯಾಂಕಾಕ್‌ನಲ್ಲಿ ವಿಧಿವಿಧಾನಗಳೊಂದಿಗೆ ಸಿರಿಕಿತ್ ಅವರ ಅಂತ್ಯಸಂಸ್ಕಾರದ ತಯಾರಿ ನಡೆದಿದ್ದು ದೇಶ ವಿದೇಶದ ಲಕ್ಷಾಂತರ ಜನ ಅವರ ಅಂತಿಮ ದರ್ಶನ ಪ‍ಡೆಯಲಿದ್ದಾರೆ ಎಂದು ಅರಮನೆ ಪ್ರಕಟಣೆ ತಿಳಿಸಿದೆ.

ರಾಣಿ ಸಿರಿಕಿತ್- ಅತುಲ್ಯದೇವ್ ದಂಪತಿಯ ಹಿರಿಯ ಮಗ ವಜಿರಲಾಂಗ್‌ಕಾರ್ನ್ ಅವರು ಪ್ರಸ್ತುತ ಥಾಯ್ಲೆಂಡ್‌ನ 10ನೇ ರಾಜನಾಗಿದ್ದಾರೆ. ಥಾಯ್ಲೆಂಡ್‌ನಲ್ಲಿ ರಾಜನನ್ನು 'ರಾಮ' ಎಂದು ಕರೆಯುತ್ತಾರೆ.

ಚಕ್ರಿ ರಾಜಮನೆತನದ ವಜಿರಲಾಂಗ್‌ಕಾರ್ನ್ ಅವರು ಜಗತ್ತಿನ ಶ್ರೀಮಂತ ರಾಜ ಎನಿಸಿಕೊಂಡಿದ್ದಾರೆ. ಅವರ ಆಸ್ತಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹5 ಲಕ್ಷ ಕೋಟಿಗೂ ಹೆಚ್ಚು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries