ಕುಂಬಳೆ: ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕಳೆದ ವಾರ ನಡೆದ ಕಲೋತ್ಸವದ ವೇಳೆ ಪ್ರದರ್ಶಿಸಲಾದ ಪ್ಯಾಲೆಸ್ಟೈನ್ ಸಾಲಿಡಾರಿಟಿ ಮೈಮ್ ಪ್ರದರ್ಶನವನ್ನು ಸೋಮವಾರ ಮರು ಪ್ರದರ್ಶಿಸಲಾಗಿದೆ. ಕಳೆದ ಶನಿವಾರ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು ಪ್ರದರ್ಶನ ಪ್ರಾರಂಭಿಸಿದ ಎರಡು ನಿಮಿಷಗಳ ನಂತರ ಶಿಕ್ಷಕರು ಪರದೆ ಹಾಕಿದ್ದು ವಿವಾದಕ್ಕೆ ಕಾರಣವಾಗಿ ರಾಜ್ಯದಾದ್ಯಂತ ಸುದ್ದಿಯಾಗಿತ್ತು.
ಬಳಿಕ ಈ ಬಗ್ಗೆ ಮಧ್ಯಪ್ರವೇಶಿಸಿದ ರಾಜ್ಯ ಶಿಕ್ಷಣ ಸಚಿವರು ನಿಲ್ಲಿಸಲಾದ ಮೈಮ್ ಅನ್ನು ಸೋಮವಾರ ಮರು ಪ್ರದರ್ಶಿಸಲು ನಿರ್ದೇಶಿಸಿದ್ದರು. ಸೋಮವಾರ ಮಧ್ಯಾಹ್ನ 12 ಗಂಟೆಗೆ ಮೈಮ್ ಅನ್ನು ಪ್ರದರ್ಶಿಸಲಾಯಿತು. ಪ್ರದರ್ಶನಕ್ಕಾಗಿ ಇಬ್ಬರು ಆರೋಪಿ ಶಿಕ್ಷಕರನ್ನು ಬದಲಾಯಿಸಲಾಗಿತ್ತು. ಸ್ಥಗಿತಗೊಳಿಸಲಾದ ಕಲೋತ್ಸವವನ್ನು ಬೆಳಿಗ್ಗೆಯಿಂದ ಪ್ರಾರಂಭಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಏತನ್ಮಧ್ಯೆ, ಸಚಿವ ವಿ ಶಿವನ್‍ಕುಟ್ಟಿ ಘಟನೆಯ ತನಿಖೆಯನ್ನು ಘೋಷಿಸಿದ್ದಾರೆ. ಸಚಿವರು ತಕ್ಷಣದ ತನಿಖಾ ವರದಿಯನ್ನು ಕೇಳಿರುವರು.
ಪ್ರತಿಭಟನೆ:
ಸೋಮವಾರ ವಿವಾದಾತ್ಮಕ ಮೈಮ್ ಪ್ರದರ್ಶನದ ಮರು ಪ್ರದರ್ಶನಕ್ಕೆ ಅವಕಾಶ ನೀಡಿರುವುದನ್ನು ಖಂಡಿಸಿ ಬಿಜೆಪಿ, ಪರಿವಾರ ಸಂಘಟನೆಗಳು ಭಾರೀ ಪ್ರತಿಭಟನೆ ವ್ಯಕ್ತಪಡಿಸಿದೆ. ಮೈಮ್ ಮರು ಪ್ರದರ್ಶನಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಶಾಲೆಯತ್ತ ಮೆರವಣಿಗೆ ನಡೆಸುತ್ತಿರುವಂತೆ ನಿಯೋಜಿಸಲಾಗಿದ್ದ ಪೋಲೀಸರು ಅರ್ಧದಲ್ಲೇ ತಡೆದರು. ಮತ್ತೊಂದು ಬದಿ ಮೈಮ್ ಪ್ರದರ್ಶನ ನಿರಾತಂಕವಾಗಿ ಪ್ರದರ್ಶಿಸಬೇಕೆಂದು ಸಿಪಿಐಎಂ, ಮುಸ್ಲಿಂಲೀಗ್ ಪ್ರಮುಖರು ಠಳಾಯಿಸಿ ಕೂಗೆಬ್ಬಿಸಿದರು.

.jpg)
.jpg)
.jpg)
.jpg)
.jpg)
