ಚಂಡಿಗಢ: ನಾಪತ್ತೆಯಾಗಿದ್ದ 27 ವರ್ಷದ ಕೆನಡಾದ ಪ್ಯಾರಾಗ್ಲೈಡರ್ ಮೇಗನ್ ಎಲಿಜಬೆತ್ ಅವರು ಮೃತದೇಹ ಹಿಮಾಲಚಲಪ್ರದೇಶದ ಧೌಲಾಧಾರ್ ವಲಯದ ಎತ್ತರದ ಪರ್ವತದಲ್ಲಿ ಪತ್ತೆಯಾಗಿದೆ.
ಈ ಸ್ಥಳದ ಸಮೀಪದ ಸ್ಥಳದಿಂದ 47 ವರ್ಷದ ಆಸ್ಟ್ರೇಲಿಯಾದ ಪ್ಯಾರಾಗ್ಲೈಡರ್ ಜಾಕೋಬ್ ಎಂಬವರನ್ನು ರಕ್ಷಿಸಲಾಗಿದೆ.
ಈ ಇಬ್ಬರು ಪ್ಯಾರಾಗ್ಲೈಡರ್ಗಳು ಕಾಂಗ್ರಾ ಜಿಲ್ಲೆಯ ಅಂತಾರಾಷ್ಟ್ರೀಯ ಬಿರ್-ಬಿಲ್ಲಿಂಗ ಪ್ಯಾರಾಗ್ಲೈಡಿಂಗ್ ಸ್ಥಳದಿಂದ ಪ್ರತ್ಯೇಕವಾಗಿ ಹಾರಾಟ ಆರಂಭಿಸಿದ್ದರು. ಇಬ್ಬರೂ ವಿವಿಧ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿ ಎದುರಿಸಿದ್ದಾರೆ.
ಏಕಾಂಗಿ ಹಾರಾಟಗಾರ್ತಿ ಆಗಿದ್ದ ಎಲಿಜಬೆತ್ ಬಿರ್-ಬಿಲ್ಲಿಂಗದಿಂದ ಹಾರಾಟ ಆರಂಭಿಸಿದ್ದರು. ಅವರು ಚೋಗನ್ನಲ್ಲಿ ಇಳಿಯಲು ನಿರೀಕ್ಷಿಸಿದ್ದರು. ಆದರೆ, ಧೌಲಾಧರ್ ಪ್ರದೇಶದ ಬಗ್ಗೆ ಅವರಿಗೆ ಅರಿವಿರಲಿಲ್ಲ. ಅವರು ದಾರಿ ತಪ್ಪಿದರು ಹಾಗೂ ಹಿಮಾನಿ ಚಾಮುಂಡ ದೇವಾಲಯದ ಉತ್ತರ ತಲಾನ್ ಜೋಟ್ ಪತನಹೊಂದಿದರು ಎಂದು ಮೂಲಗಳು ತಿಳಿಸಿವೆ.
''ಮೇಗನ್ ಎಲಿಜಬೆತ್ ಓರ್ವ ಏಕಾಂಗಿ ಅನುಭವಿ ಹಾರಾಟಗಾರರಾಗಿದ್ದರು. ಅವರು ಬಿಲ್ಲಿಂಗದಿಂದ ಹಾರಾಟ ಆರಂಭಿಸಿದ್ದರು. ಅವರು ಚೋಗನ್ನಲ್ಲಿ ಇಳಿಯುವ ನಿರೀಕ್ಷೆ ಹೊಂದಿದ್ದರು. ಆದರೆ, ದಾರಿ ತಪ್ಪಿದರು'' ಎಂದು ಬಿಲ್ಲಿಂಗ ಪ್ಯಾರಾಗ್ಲೈಡಿಂಗ್ ಅಸೋಸಿಯೇಶನ್ನ ಅಧ್ಯಕ್ಷ ಅನುರಾಗ್ ಶರ್ಮಾ ತಿಳಿಸಿದ್ದಾರೆ.
ಬೈಜ್ನಾತ್ನ ಅಧಿಕಾರಿಗಳು ಪರ್ವತಾರೋಹಿಗಳು ಹಾಗೂ ಬಿರ್ ಬಿಲ್ಲಿಂಗ ಪ್ಯಾರಾಗ್ಲೈಡಿಂಗ್ ಅಸೋಸಿಯೇಶನ್ (ವಿಬಿಎ)ನ ಸ್ವಯಂ ಸೇವಕರ ನೆರವಿನಿಂದ ರವಿವಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.
ರಕ್ಷಣಾ ತಂಡದ ಸದಸ್ಯ ರಾಹುಲ್ ಸಿಂಗ್ನನ್ನು ರವಿವಾರ ಸಂಜೆ ಆ ಪ್ರದೇಶಕ್ಕೆ ವಿಮಾನದ ಮೂಲಕ ಇಳಿಸಲಾಯಿತು. ರಾತ್ರಿ ಅವರು ಅಪಘಾತದ ಸ್ಥಳ ತಲುಪಿದಾಗ ಎಲಿಜಬೆತ್ ಸ್ಪಂದಿಸದೇ ಇರುವುದನ್ನು ಕಂಡುಕೊಂಡರು. ಎಲಿಜಬೆತ್ ತೀವ್ರ ಶೀತ ಹಾಗೂ ಕಲ್ಲಿನ ನೆಲದ ಮೇಲೆ ಇಳಿಯುವ ಸಂದರ್ಭ ಉಂಟಾದ ಗಾಯಗಳಿಂದ ಮೃತಪಟ್ಟಿದ್ದರು. ಅನಂತರ ಅವರ ಮೃತದೇಹವನ್ನು ಏರ್ಲಿಫ್ಟ್ ಮಾಡಲಾಯಿತು.
ಕುಲ್ಲು ಜಿಲ್ಲೆಯ ಪೊಲಿಂಗ್-ಬರೋಟ್ ಕಣಿವೆಯ ಪರ್ವತದಲ್ಲಿ ಸುಮಾರು 3,302 ಮೀಟರ್ ಎತ್ತರದಲ್ಲಿ ಸಿಲುಕಿಕೊಂಡಿದ್ದ ಆಸ್ಟ್ರೇಲಿಯಾದ ಇನ್ನೋರ್ವ ಪ್ಯಾರಾಗ್ಲೈಡರ್ ಜಾಕೋಬ್ ಅವರಿಂದ 'ಸಹಾಯಕ್ಕಾಗಿ ತುರ್ತು ಕರೆ'ಯನ್ನು ಸ್ವೀಕರಿಸಲಾಗಿತ್ತು. ಅವರನ್ನು ರಕ್ಷಿಸಿ ಬಿರ್ನ ಚೋಗನ್ನಲ್ಲಿ ಇಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

