HEALTH TIPS

ಬಿಹಾರ | ಒಪ್ಪಂದಕ್ಕೆ ಬಾರದ 'ಇಂಡಿಯಾ': RJD 143, ಕಾಂಗ್ರೆಸ್‌ 61ರಲ್ಲಿ ಸ್ಪರ್ಧೆ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ನಡುವೆ ಕೊನೆಗೂ ಅಧಿಕೃತವಾಗಿ ಸೀಟು ಹಂಚಿಕೆ ಒಪ್ಪಂದ ಏರ್ಪಡಲಿಲ್ಲ.

ಆಯಾ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದ ಪ್ರಕಾರ, ಆರ್‌ಜೆಡಿ 143ರಲ್ಲಿ, ಕಾಂಗ್ರೆಸ್‌ 61ರಲ್ಲಿ, ಸಿಪಿಐ (ಎಂಎಲ್‌) 20ರಲ್ಲಿ ಸ್ಪರ್ಧಿಸಲಿವೆ.

ಬಾಕಿ ಕ್ಷೇತ್ರಗಳನ್ನು ವಿಐಪಿ, ಸಿಪಿಐ (ಎಂ) ಸೇರಿದಂತೆ ಉಳಿದ ಪಕ್ಷಗಳಿಗೆ ಬಿಟ್ಟು ಕೊಡಲಾಗಿದೆ. ಒಪ್ಪಂದ ಏರ್ಪಡದ ಕಾರಣ ಕನಿಷ್ಠ ಒಂಬತ್ತು ಕ್ಷೇತ್ರಗಳಲ್ಲಿ ಮೈತ್ರಿ ಕೂಟದ ಪಕ್ಷಗಳು ಪರಸ್ಪರ ಸ್ಪರ್ಧೆಗೆ ಇಳಿದಿವೆ.

ಐದು ಕ್ಷೇತ್ರಗಳಲ್ಲಿ ಆರ್‌ಜೆಡಿ-ಕಾಂಗ್ರೆಸ್‌ ಮುಖಾಮುಖಿಯಾಗಲಿವೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ನಾಮಪತ್ರ ವಾಪಸ್‌ ‍ಪಡೆಯಲು ಬುಧವಾರ ಕೊನೆಯ ದಿನ. ಹೀಗಾಗಿ, ನಾಲ್ಕು ಕ್ಷೇತ್ರಗಳಲ್ಲಿ ಸಮಸ್ಯೆ ಬಗೆಹರಿಸಬಹುದು ಎಂದು ಮೈತ್ರಿಕೂಟದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿವೆ.

ಮೊದಲ ಹಂತದ ಚುನಾವಣೆ ನಡೆಯುವ 121 ಕ್ಷೇತ್ರಗಳಲ್ಲಿ ನಾಮಪತ್ರ ವಾ‍ಪಸ್‌ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 122 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲೂ ಕಡೆಯ ದಿನಾಂಕವಾಗಿತ್ತು. ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಆರ್‌ಜೆಡಿ ಒಂದೇ ಕಂತಿನಲ್ಲಿ 143 ಅಭ್ಯರ್ಥಿಗಳ ಪಟ್ಟಿಯನ್ನು ‍ಪ್ರಕಟಿಸಿತು. ಈ ಪಟ್ಟಿ ಪ್ರಕಟಗೊಂಡಿದ್ದು ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯಲು ಕೆಲವೇ ಗಂಟೆಗಳು ಇರುವಾಗ. ಇದಕ್ಕೂ ಮೊದಲೇ ಪಕ್ಷವು ಅಭ್ಯರ್ಥಿಗಳಿಗೆ ಬಿ-ಫಾರಂ ನೀಡಿತ್ತು.

ಆರ್‌ಜೆಡಿಗೆ ಮೊದಲಿನಿಂದಲೂ ಯಾದವ-ಮುಸ್ಲಿಂ ಸಮುದಾಯಗಳೇ ಸಾಂಪ್ರದಾಯಿಕ ಮತ ಬ್ಯಾಂಕ್‌. ಟಿಕೆಟ್‌ ಹಂಚಿಕೆಯಲ್ಲೂ ಈ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ಈ ಸಮುದಾಯಗಳಿಗೆ 50ಕ್ಕೂ ಅಧಿಕ ಟಿಕೆಟ್‌ ಕೊಡಲಾಗಿದೆ. 23 ಮಹಿಳೆಯರಿಗೆ ಮಣೆ ಹಾಕಲಾಗಿದೆ.

ಕಾಂಗ್ರೆಸ್‌ ಪಕ್ಷವು ಮತ್ತೆ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಾಜ್ಯ ಘಟಕದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಪಕ್ಷವು ಮತ್ತೆ ಹಂತ ಹಂತವಾಗಿ ಮೂರು ಪಟ್ಟಿಗಳನ್ನು ಪ್ರಕಟಿಸಿತು. ಪಕ್ಷವು 61 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಕಳೆದ ಬಾರಿ ಪಕ್ಷವು 70ರಲ್ಲಿ ಸ್ಪರ್ಧಿಸಿ 19ರಲ್ಲಿ ಜಯ ಗಳಿಸಿತ್ತು.

ಪಕ್ಷವು ರಾಜ್ಯ ಘಟಕದ ಅಧ್ಯಕ್ಷ ರಾಜೇಶ್‌ ಕುಮಾರ್ ರಾಮ್‌ ಅವರನ್ನು ಕುಟುಂಬ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಿದೆ. ಈ ಕ್ಷೇತ್ರಕ್ಕಾಗಿ ಆರ್‌ಜೆಡಿ ಸಹ ಪಟ್ಟು ಹಿಡಿದಿತ್ತು. ಈ ಕ್ಷೇತ್ರಕ್ಕೆ ಆರ್‌ಜೆಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ವದಂತಿ ಹಬ್ಬಿತ್ತು. ಆದರೆ, 143 ಕ್ಷೇತ್ರಗಳ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಯ ಹೆಸರಿಲ್ಲ.

ಕೈ ಪಾಳಯದಲ್ಲಿ ಅಸಮಾಧಾನ:

ಅಧಿಕೃತವಾಗಿ ಮೈತ್ರಿ ಒಪ್ಪಂದ ಏರ್ಪಡದ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. 'ಸೀಟು ಹಂಚಿಕೆಯ ಒಪ್ಪಂದ ಕುದುರಿಸುವಲ್ಲಿ ನಮ್ಮ ಉನ್ನತ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಅರ್ಹರಲ್ಲದ ಹಲವಾರು ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ' ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು.

'ಬಾರಾಬಿಘಾ ವಿಧಾನಸಭಾ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಳ್ಳಿ. 2020ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಜಾನಂದ ಪ್ರಸಾದ್ ಸಾಹಿ 200ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅವರಿಗೇ ಟಿಕೆಟ್ ನೀಡಿಲ್ಲ' ಎಂದು ಅವರು ಹೇಳಿದರು.

'ಇನ್ನೊಂದೆಡೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರೂ, ರಿಗಾದ ಮಾಜಿ ಶಾಸಕ ಅಮಿತ್ ಕುಮಾರ್ ತುನ್ನಾ ಮತ್ತು ಬಾಗಾದ ಜಯೇಶ್ ಮಂಗಲಂ ಸಿಂಗ್ ಅವರಿಗೆ ಈ ಬಾರಿ ಪಕ್ಷ ಟಿಕೆಟ್ ನೀಡಿದೆ. ಟಿಕೆಟ್‌ ಹಂಚಿಕೆಯಲ್ಲಿ ಇಂತಹ ಹಲವು ಎಡವಟ್ಟುಗಳು ಆಗಿವೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries