ನವದೆಹಲಿ: ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮಕ್ಕಳ ಸರಣಿ ಸಾವಿಗೆ ಕಾರಣವಾದ 'ಕೋಲ್ಡ್ರಿಫ್' ಕೆಮ್ಮಿನ ಔಷಧ ತಯಾರಿಸುವ ಕಾಂಚೀಪುರಂ ಮೂಲದ ಕಂಪನಿ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ, ತಮಿಳುನಾಡು ಆಹಾರ ಮತ್ತು ಔಷಧ ನಿಯಂತ್ರಣ (TNFDA) ಇಲಾಖೆಯ ನಿಯಂತ್ರಣ ಮಾನದಂಡಗಳ ಜಾರಿಯಲ್ಲಿ ನಡೆದಿರುವ ಲೋಪ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಶ್ರೇಸನ್ ಫಾರ್ಮಾಗೆ 2011ರಲ್ಲಿ TNFDA ಪರವಾನಗಿ ನೀಡಿದೆ. ಆದರೆ ನಿರಾಶಾದಾಯಕ ಮೂಲಸೌಕರ್ಯ ಮತ್ತು ರಾಷ್ಟ್ರೀಯ ಔಷಧ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಹಲವು ಪ್ರಕರಣಗಳಿದ್ದರೂ ಈವರೆಗೂ ಈ ಘಟಕದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಮಿಳುನಾಡು ಆಹಾರ ಮತ್ತು ಔಷಧ ನಿಯಂತ್ರಣ ಘಟಕ ಕಾಲಕಾಲಕ್ಕೆ ಪರಿಶೀಲನೆಯನ್ನೇ ನಡೆಸಿಲ್ಲ ಎಂದು ಹೇಳಲಾಗಿದೆ.
ಶ್ರೇಸನ್ ಫಾರ್ಮಾಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಇತ್ತೀಚೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದೆ. ಇಲ್ಲಿನ ಭಯಾನಕ ಸ್ಥಿತಿಯನ್ನು ತನಿಖೆ ಬಹಿರಂಗಪಡಿಸಿದೆ. ಲೆಕ್ಕ ಪರಿಶೋಧನೆಯಲ್ಲಿ ಸಿಡಿಎಸ್ಸಿಒ ಭಾಗಿಯಾಗಿಲ್ಲ. ಜತೆಗೆ, ರಾಜ್ಯ ಔಷಧ ನಿಯಂತ್ರಣ ಘಕಟವೂ ಕಂಪನಿಯ ಕುರಿತು ಸಿಡಿಎಸ್ಸಿಒಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಕಂಪನಿ ಕುರಿತು ಸಿಡಿಎಸ್ಸಿಒಗೆ ಯಾವುದೇ ಮಾಹಿತಿ ಇರಲಿಲ್ಲ ಎಂದೂ ಮೂಲಗಳು ಹೇಳಿವೆ.
ಔಷಧ ತಯಾರಿಕರ ಪಟ್ಟಿಗೆ ಸೇರಿದ ಶ್ರೇಸನ್
ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಕೇಂದ್ರೀಕೃತ ದತ್ತಾಂಶದಲ್ಲಿ ದಾಖಲಾಗಿರುವ ಎಲ್ಲಾ ತಯಾರಕರಿಗೂ ಮತ್ತು ತಮಿಳುನಾಡಿನ ಔಷಧ ನಿಯಂತ್ರಕರಿಗೂ 2023ರ ಅಕ್ಟೋಬರ್ನಲ್ಲಿ ಗೂಗಲ್ ಶೀಟ್ನಲ್ಲಿ ತಮ್ಮ ದಾಖಲೆ ಸೇರಿಸಲು ಕೋರಲಾಗಿತ್ತು. ಇದರ ಆಧಾರದಲ್ಲಿ ಪ್ರತಿ ತಿಂಗಳು ಸಭೆಗಳು ನಡೆಯುತ್ತಿದ್ದವು. ಆದರೆ ಶ್ರೇಸನ್ ಫಾರ್ಮಾ ಹೆಸರು ನೋಂದಣಿ ಆಗಿಲ್ಲ. TNFDA ಕೂಡಾ ಕಂಪನಿಯನ್ನು ಈ ಗುಂಪಿಗೆ ಸೇರಿಸಿಲ್ಲ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ' ಎಂದು ಮೂಲಗಳು ಹೇಳಿವೆ.
ಅ. 1 ಹಾಗೂ ಅ. 2ರಂದು ಶ್ರೇಸನ್ ಫಾರ್ಮಾ ಕಂಪನಿಯಲ್ಲಿ TNFDA ಲೆಕ್ಕಪರಿಶೋಧನೆ ನಡೆಸಿದೆ. ಆದರೆ ಇದನ್ನು CDSCO ಕೇಂದ್ರ ಕಚೇರಿಗಾಗಲೀ ಅಥವಾ ಪ್ರಾದೇಶಿಕ ಕಚೇರಿಗೆ ಮಾಹಿತಿ ನೀಡಿಲ್ಲ. ಅ. 3ರಂದು CDSCO ತಂಡವು ಅಪಾಯ ಆಧಾರಿತ ತಪಾಸಣೆ ತಂಡದೊಂದಿಗೆ ಶ್ರೇಸನ್ ಫಾರ್ಮಾಗೆ ತೆರಳಿತ್ತು. ಇದರಲ್ಲಿ ಪಾಲ್ಗೊಳ್ಳುವಂತೆ ತಮಿಳುನಾಡಿನ ಔಷಧ ನಿಯಂತ್ರಿಕ ವಿಭಾಗದ ಇನ್ಸ್ಪೆಕ್ಟರ್ಗೆ ಹಲವು ಬಾರಿ ಕೋರಲಾಗಿತ್ತು. ಆದರೆ ಅವರು ಬರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್ (ಡಿಇಜಿ) ಮತ್ತು ಇಥಲಿನ್ ಗ್ಲೈಕಾಲ್ (ಇಜಿ) ಇರುವ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿವೆ. ಮಧ್ಯಪ್ರದೇಶದಲ್ಲಿ ಐದು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ರಾಜಸ್ಥಾನದಲ್ಲಿ ಮೂವರು ಮಕ್ಕಳು ಅಸುನೀಗಿದ್ದು, ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ವಿಷ ದ್ರಾವಣವಿರುವ ಸಿರಪ್ ಸೇವಿಸಿದ್ದರಿಂದ ಸಂಭವಿಸಿರುವ ಮಕ್ಕಳ ಸರಣಿ ಸಾವಿನ ಹಿನ್ನೆಲೆಯಲ್ಲಿ, ಮಾರುಕಟ್ಟೆಗೆ ಯಾವುದೇ ಔಷಧ ಬಿಡುಗಡೆಗೂ ಮುನ್ನ ಅವುಗಳಲ್ಲಿರುವ ಕಚ್ಚಾ ಸಾಮಗ್ರಿಗಳ ಪರೀಕ್ಷೆ ನಡೆಸಿ, ಅವುಗಳು ಸುರಕ್ಷಿತ ಎಂದು ಖಾತ್ರಿಯಾದ ನಂತರವೇ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಭಾರತೀಯ ಔಷಧ ನಿಯಂತ್ರಕ (DCGI) ಮಾರ್ಗಸೂಚಿ ಪ್ರಕಟಿಸಿದೆ.

