ಎನ್‌ಸಿಪಿ ಮುಖಂಡ ರಾಮಾವತಾರ ಜಗ್ಗಿ ಅವರ ಹತ್ಯೆ ಹತ್ಯೆ 2003ರಲ್ಲಿ ನಡೆದಿತ್ತು. ಅಜಿತ್ ಜೋಗಿ ಛತ್ತಿಸ್ಗಢ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ನಿವಾಸದಲ್ಲಿ ಈ ಹತ್ಯೆಯ ಪಿತೂರಿ ನಡೆದಿತ್ತು ಎನ್ನಲಾಗಿದೆ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು ಹಾಗೂ ವಿಚಾರಣಾ ನ್ಯಾಯಾಲಯ 2007ರಲ್ಲಿ ಇತರ ಇಪ್ಪತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಅಮಿತ್ ಜೋಗಿಯನ್ನು ದೋಷಮುಕ್ತಗೊಳಿಸಿತ್ತು. ಆ ಬಳಿಕ ಸರ್ಕಾರ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸಿಬಿಐ ಕೂಡಾ ಖುಲಾಸೆಯನ್ನು ಪ್ರಶ್ನಿಸಿ 1400 ದಿನಗಳ ಬಳಿಕ ಹೈಕೋರ್ಟ್ ಮೆಟ್ಟಲೇರಿತ್ತು.
ಆದರೆ ಭಿನ್ನ ಕಾರಣಗಳಿಂದ ಈ ಎರಡೂ ಮೇಲ್ಮನವಿಗಳನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಈ ಮೂಲಕ ಜೋಗಿ ವಿರುದ್ಧದ ಪ್ರಕರಣ ಅಂತ್ಯ ಕಂಡಿತ್ತು. ಪ್ರಕರಣವನ್ನು ಸಿಬಿಐ ವಿಚಾರಣೆ ನಡೆಸಿರುವುದರಿಂದ ಮೇಲ್ಮನವಿ ಸಲ್ಲಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ರಾಜ್ಯದ ಮನವಿಯನ್ನು ತಿರಸ್ಕರಿಸಿದರೆ, 1373 ದಿನ ವಿಳಂಬವಾಗಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಬಿಐ ಅರ್ಜಿಯನ್ನೂ ವಜಾಗೊಳಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ ಮತ್ತು ಸಿಬಿಐ ಸುಪ್ರೀಂ ಮೆಟ್ಟಲೇರಿದ್ದವು.
ಸಿಬಿಐ ಮೇಲ್ಮನವಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ, ಈ ಪ್ರಕರಣ ಸೂಕ್ಷ್ಮ ಸ್ವರೂಪದ್ದಾಗಿದ್ದು, ಸಿಬಿಐ ಮೇಲ್ಮನವಿಯನ್ನು ಪರಿಗಣಿಸುವ ವೇಳೆ ಹೈಕೋರ್ಟ್ ಉದಾರ ಹಾಗೂ ಪ್ರಾಯೋಗಿಕ ದೃಷ್ಟಿಕೋನ ಪ್ರದರ್ಶಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ.

