ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಧಾನ್ಯಲಕ್ಷ್ಮೀ ಕೃಷಿ ಯೋಜನೆಯಡಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಭತ್ತವನ್ನು ಕಟಾವು ಮಾಡುವ ವರ್ಷಂಪ್ರತಿ ನಡೆಯುವ ಕೊಯ್ಲು ಉತ್ಸವ ಭಾನುವಾರ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ವೇದಿಕೆಯಲ್ಲಿ ಹಿರಿಯ ಕೃಷಿಕೆ ಕಮಲಾ ಹೇರೂರು, ಮಂಗಳೂರಿನ ಮಡಿಲು ಸೇವಾ ತಂಡದ ಅಧ್ಯಕ್ಷ ಗಜೇಂದ್ರ ಪೂಜಾರಿ, ಮೀಂಜ ಗ್ರಾ.ಪಂ. ಕ್ಷೇಮ ಕಾರ್ಯಸ್ಥಾಯಿ ಸಮಿತಿಯ ಅಧ್ಯಕ್ಷ ಬಾಬು ಕುಳೂರು, ಹಿರಿಯ ಕೃಷಿಕ ಚೆರುಗೋಳಿಯ ಬಾಲಕೃಷ್ಣ ಪಡ್ಪು ಉಪಸ್ಥಿತರಿದ್ದರು.
ಪರಮಪೂಜ್ಯ ಸ್ವಾಮೀಜಿಯವರು ದೀಪ ಪ್ರಜ್ವಲನೆಯ ಮೂಲಕ ಸಾಂಪ್ರದಾಯಿಕವಾಗಿ ಕೊಯ್ಲು ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನಿಡಿದ ಅವರು, ವಿಷಮುಕ್ತ ಆಹಾರವನ್ನು ನಾವೆಲ್ಲರೂ ಬಳಸಲು ಸಾವಯವ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ನಮ್ಮ ಅಡುಗೆ ಕೋಣೆಯನ್ನು ಔಷದಾಲಯವಾಗಿಸಿ ಭಾರತವನ್ನು ಶ್ರೀಮಂತಗೊಳಿಸೋಣ ಎಂದು ಕರೆ ನೀಡಿದರು.
ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರಾದ ಶ್ಲಾಘ್ಯ, ಸಮೃತ, ಯಶಿತರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸದಾಶಿವ ಮೋಂತಿಮಾರ್ ಸ್ವಾಗತಿಸಿ ವಂದಿಸಿದರು. ಬಳಿಕ ಪರಮಪೂಜ್ಯ ಸ್ವಾಮೀಜಿಯವರೊಂದಿಗೆ ಸೇರಿದ ಸಮಸ್ತರು ಮೆರವಣಿಗೆಯಲ್ಲಿ ಗದ್ದೆಗೆ ತೆರಳಿ ಭತ್ತ ಕಟಾವು ಮಾಡಲಾಯಿತು.

.jpeg)
.jpeg)
