ಕಣ್ಣೂರು: ಕೇರಳದ ಪಾಲಾದಾಯಿ ಎಂಬಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆಯೆಂದು ಕೇರಳ ಸಾಮಾನ್ಯ ಶಿಕ್ಷಣ ಸಚಿವ ವಿ.ಸಿವನ್ಕುಟ್ಟಿ ರವಿವಾರ ತಿಳಿಸಿದ್ದಾರೆ.
ತಲಶ್ಯೇರಿಯ ತ್ವರಿತಗತಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜಲರಜನಿ ಅವರು ನವೆಂಬರ್ 15ರಂದು ನೀಡಿದ ತೀರ್ಪಿನಲ್ಲಿ ಕಡವತ್ತೂರ್ ನ ನಿವಾಸಿ ಶಿಕ್ಷಕ, ಬಿಜೆಪಿ ಮುಖಂಡ ಪದ್ಮರಾಜನ್ ಯಾನೆ ಪಾಪ್ಪೆನ್ ಮಾಸ್ಟರ್ (48), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಗಳಡಿ ದೋಷಿಯೆಂದು ಪರಿಗಣಿಸಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು.
ಪದ್ಮರಾಜನ್ನನ್ನು ಸೇವೆಯಿಂದ ವಜಾಗೊಳಿಸುವ ಆದೇಶವನ್ನು ಆತ ಅಧ್ಯಾಪಕನಾಗಿದ್ದ ಶಾಲೆಯ ಮ್ಯಾನೇಜರ್ ಜಾರಿಗೊಳಿಸಿದ್ದಾರೆಂದು ಸಚಿವ ಸಿವನ್ಕುಟ್ಟಿ ತನ್ನ ಫೇಸ್ ಬುಕ್ ಪೇಜ್ನಲ್ಲಿ ತಿಳಿಸಿದ್ದಾರೆ. ಆರೋಪಿ ಪದ್ಮರಾಜನ್ ಬಿಜೆಪಿ ಮುಖಂಡನೂ ಆಗಿದ್ದನೆಂದು ತಿಳಿದುಬಂದಿದೆ.
ಆರೋಪಿ ಪದ್ಮರಾಜನ್ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಘೋಷಿಸಿದ ಬೆನ್ನಲ್ಲೇ ಆತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಶಾಲಾಡಳಿತಕ್ಕೆ ಸಾಮಾನ್ಯ ಶಿಕ್ಷಣ ಇಲಾಖೆ ನಿರ್ದೇಶನ ನೀಡಿತ್ತು.
ಆರೋಪಿ ಪದ್ಮರಾಜನ್ 10 ವರ್ಷದ ವಿದ್ಯಾರ್ಥಿನಿಗೆ ಶಾಲೆಯ ಶೌಚಾಲಯದಲ್ಲಿ ಹಾಗೂ ತನ್ನ ನಿವಾಸದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದನೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು.
ಪದ್ಮರಾಜನ್ ವಿರುದ್ಧ ಪಾನೂರ್ ಪೊಲೀಸರು 2020ರ ಮಾರ್ಚ್ 17ರಂದು ಪ್ರಕರಣ ದಾಖಲಿಸಿದ್ದು, ಎಪ್ರಿಲ್ 15ರಂದು ಆತನನ್ನು ಬಂಧಿಸಿದ್ದರು. ಆದರೆ ಈ ಪ್ರಕರಣವು ಎಸ್ಡಿಪಿಐ ಪಕ್ಷವು ನಡೆಸಿದ ಸಂಚಿನ ಭಾಗವಾಗಿದೆಯೆಂದು ಬಿಜೆಪಿಯು ಆಪಾದಿಸಿದೆ.
ಭಾರೀ ವಿವಾದ ಸೃಷ್ಟಿಸಿದ್ದ ಈ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಹಸ್ತಾಂತರಿಸಲಾಗಿತ್ತು. ಆರಂಭಿಕ ಹಂತಲ್ಲಿ ಪೊಸ್ಕೊ ಆರೋಪಗಳನ್ನು ಒಳಗೊಂಡಿಲ್ಲವಾದ್ದರಿಂದ, ಆರೋಪಿಯು ಜಾಮೀನು ಪಡೆಯುವಲ್ಲಿ ಸಫಲನಾಗಿದ್ದನು.
ಆದರೆ ಸಂತ್ರಸ್ತೆಯ ಕುಟುಂಬವು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಕೇರಳ ಹೈಕೋರ್ಟ್ ಹೊಸದಾಗಿ ಪ್ರಕರಣದ ತನಿಖೆಗೆ ಆದೇಶಿಸಿತ್ತು. ತನಿಖೆಯ ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತವಾದ ಕಾರಣ ತನಿಖಾ ತಂಡವನ್ನು ಎರಡು ಸಲ ಬದಲಿಸಲಾಗಿತ್ತು. ಅಂತಿಮವಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಇ.ಜೆ.ಜಯರಾಜ್ ಅವರು ತನಿಖೆಯನ್ನು ಪೂರ್ಣಗೊಳಿಸಿ, ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

