ಕೊಟ್ಟಾಯಂ: ಬಿರಿಯಾನಿಯಲ್ಲಿ ಸತ್ತ ಬಸವನಹುಳು ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಮತ್ತು ಜೊಮಾಟೊಗೆ ದಂಡ ವಿಧಿಸಲಾಗಿದೆ. ಎಟ್ಟುಮನೂರ್ ಮೂಲದ ವಿಷ್ಣು ಸಲ್ಲಿಸಿದ ದೂರಿನ ಮೇರೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕ್ರಮ ಕೈಗೊಂಡಿದೆ.
ಹೋಟೆಲ್ ಮಾಲೀಕರು ದೂರುದಾರರಿಗೆ ಪರಿಹಾರವಾಗಿ 50,000 ರೂ. ಮತ್ತು ನ್ಯಾಯಾಲಯದ ವೆಚ್ಚವಾಗಿ 2,000 ರೂ. ಪಾವತಿಸಬೇಕು. ಇದರ ಜೊತೆಗೆ, ಬಿರಿಯಾನಿಯ ಬೆಲೆಯನ್ನು ಮರುಪಾವತಿಸಬೇಕು. ಜೊಮಾಟೊ ಪರಿಹಾರವಾಗಿ 25,000 ರೂ. ಪಾವತಿಸಬೇಕು ಎಂದು ಆಯೋಗವು ತನ್ನ ತೀರ್ಪಲ್ಲಿ ತಿಳಿಸಿದೆ.
ಕಳೆದ ನವೆಂಬರ್ 10 ರಂದು ಅತಿರಂಪುಳದಲ್ಲಿರುವ ಹೋಟೆಲ್‍ನಿಂದ ಜೊಮಾಟೊ ಅಪ್ಲಿಕೇಶನ್ ಮೂಲಕ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ಸತ್ತ ಬಸವನ ಹುಳ ಕಂಡುಬಂದಿತ್ತು. ಅವರು ದೂರಿನೊಂದಿಗೆ ಜೊಮಾಟೊವನ್ನು ಸಂಪರ್ಕಿಸಿದಾಗ, ಬಿರಿಯಾನಿಯ ಬೆಲೆಯನ್ನು ಮರುಪಾವತಿಸಲಾಗುವುದು ಎಂದು ತಿಳಿಸಲಾಯಿತು, ಆದರೆ ಹಣ ಮರು ಪಾವತಿಸಿರಲಿಲ್ಲ.
ನಂತರ ವಿಷ್ಣು ಆಹಾರ ಭದ್ರತಾ ಇಲಾಖೆಗೆ ದೂರು ಸಲ್ಲಿಸಿದರು. ಆಹಾರವನ್ನು ರೆಸ್ಟೋರೆಂಟ್‍ನಲ್ಲಿ ಬೇಯಿಸಿ ಬಡಿಸಲಾಗಿದ್ದು, ಇದು ಹೋಟೆಲ್‍ನ ಗಂಭೀರ ಲೋಪ ಎಂದು ಆಯೋಗವು ಪತ್ತೆಮಾಡಿದೆ.

