ವಾಷಿಂಗ್ಟನ್/ನ್ಯೂಯಾರ್ಕ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನ್ಯೂಯಾರ್ಕ್ ನೂತನ ಮೇಯರ್ ಮುಹಮ್ಮದ್ ಮಮ್ದಾನಿ ನಡುವೆ ಬುಧವಾರ ನಡೆದ ಸಭೆಯಲ್ಲಿ ಸ್ನೇಹಪೂರ್ವಕ ಧ್ವನಿ ಕೇಳಿಬಂದಿದೆ. ಬಹು ನಿರೀಕ್ಷಿತ ಟ್ರಂಪ್- ಮಮ್ದಾನಿ ಭೇಟಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸೌಹಾರ್ದಮಯವಾಗಿರುವುದು ಅಚ್ಚರಿ ಮೂಡಿಸಿದೆ.
ಮಮ್ದಾನಿ ಆಡಳಿತದಲ್ಲಿ ನ್ಯೂಯಾರ್ಕ್ ಸಂಪೂರ್ಣವಾಗಿ ಆರ್ಥಿಕ ಹಾಗೂ ಸಾಮಾಜಿಕವಾಗಿ ವಿಕೋಪ ಪರಿಸ್ಥಿತಿ ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದ ಒಂದು ತಿಂಗಳ ಬಳಿಕ ಮಮ್ದಾನಿಯವರು ಮೇಯರ್ ಆಗಿರುವ ನಗರದಲ್ಲಿ ಉತ್ತಮ ಜೀವನ ನಡೆಸಬಹುದು ಎಂಬಷ್ಟರ ಮಟ್ಟಿಗೆ ಟ್ರಂಪ್- ಮಮ್ದಾನಿ ಸಂಬಂಧ ಉತ್ತಮಗೊಂಡಿದೆ.
ಚುನಾವಣೋತ್ತರ ಕಠಿಣ ಹೇಳಿಕೆಗಳು ಮತ್ತು ಆರೋಪ-ಪ್ರತ್ಯಾರೋಪಗಳ ನಡುವೆಯೇ ನಡೆದ ಈ ಮಾತುಕತೆಯಲ್ಲಿ ಇಬ್ಬರೂ ಸಹಕಾರದ ಮನೋಭಾವ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರದ ಸಮಯದಲ್ಲಿ ಮಮ್ದಾನಿ ಆಡಳಿತದಲ್ಲಿ ನ್ಯೂಯಾರ್ಕ್ ನಗರ "ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ವಿಪತ್ತು" ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಟ್ರಂಪ್, ಈಗ "ಮಮ್ದಾನಿ ನಗರವನ್ನು ಮುನ್ನಡೆಸುವ ಬಗ್ಗೆ ನನಗೆ ಸಹಮತವಿದೆ. ಪ್ರೀತಿಯ ನಗರಕ್ಕಾಗಿ ಅವರು ಕೆಲಸ ಮಾಡಲಿದ್ದಾರೆ" ಎಂದು ಅಭಿಪ್ರಾಯಪಟ್ಟರು.
ನ್ಯೂಯಾರ್ಕ್ ನಿವಾಸಿಗಳ ಜೀವನ ವೆಚ್ಚವನ್ನು ಕೈಗೆಟುಕುವ ಮಟ್ಟಕ್ಕೆ ತರಲು ಕೆಲಸ ಮಾಡುವ ಕುರಿತು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದೇವೆ. ಈ ವಿಷಯದಲ್ಲಿ ಅಧ್ಯಕ್ಷರೊಂದಿಗೆ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಮಮ್ದಾನಿ ಪ್ರತಿಕ್ರಿಯಿಸಿದರು.
ಭೇಟಿಯ ಸಂದರ್ಭದಲ್ಲಿ ಇಬ್ಬರು ನಾಯಕರ ನಿಲುವುಗಳು ಅಚ್ಚರಿ ತಂದವು. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಇಬ್ಬರು ಪರಸ್ಪರ ಆರೋಪ ಮಾಡುತ್ತಿದ್ದರು. ಮಮ್ದಾನಿ ಗೆದ್ದರೆ ನ್ಯೂಯಾರ್ಕ್‌ಗೆ ಫೆಡರಲ್ ನಿಧಿ ತಡೆ, ನ್ಯಾಷನಲ್ ಗಾರ್ಡ್ ನಿಯೋಜನೆ ಹಾಗೂ ವಲಸೆ ಕಾರ್ಯಾಚರಣೆಗೆ ಅಡ್ಡಿಯಾದರೆ ಬಂಧನ ಮಾಡಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಮಮ್ದಾನಿಯೂ ಗೆದ್ದ ಬಳಿಕ ಮಾಡಿದ ಭಾಷಣದಲ್ಲಿ "ನಮ್ಮಲ್ಲಿ ಒಬ್ಬರನ್ನು ತಲುಪಲು, ನೀವು ನಮ್ಮೆಲ್ಲರನ್ನು ದಾಟಬೇಕಾಗುತ್ತದೆ" ಎಂದು ಟ್ರಂಪ್‌ಗೆ ಕಠಿಣ ಸಂದೇಶ ನೀಡಿದ್ದರು.

