ಕಾಸರಗೋಡು: ಬಿಹಾರ ಚುನಾವಣಾ ಫಲಿತಾಂಶಗಳ ನಂತರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಭಾರತೀಯ ಪ್ರಜಾಪ್ರಭುತ್ವವನ್ನು ಅಣಕಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎನ್‍ಡಿಎಗೆ ಮತ ಹಾಕಿದವರೆಲ್ಲರೂ ಕೆಟ್ಟವರು ಎಂಬ ಕಾಂಗ್ರೆಸ್‍ನ ಪ್ರಚಾರ ಆ ಪಕ್ಷದ ಅವನತಿಯನ್ನು ಸೂಚಿಸುತ್ತಿದೆ. ವಿರೋಧ ಪಕ್ಷದಲ್ಲಿರುವುದರ ಅಸಹಿಷ್ಣುತೆಯಿಂದಾಗಿ ಕಾಂಗ್ರೆಸ್ ದೇಶದ ಮತದಾರರನ್ನು ಅಪಹಾಸ್ಯ ಮಾಡುವುದನ್ನು ಕೊನೆಗೊಳಿಸಬೇಕು. ಸೋತಾಗ ಮತ ಯಂತ್ರ ಮತ್ತು ಮತದಾರರ ಪಟ್ಟಿಯನ್ನು ದೂಷಿಸುವವರು ತಮ್ಮನ್ನು ತಾವು ಮೂರ್ಖರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಬಿಹಾರದಲ್ಲಿನ ಜನರ ತೀರ್ಪು ಎನ್‍ಡಿಎ ಸರ್ಕಾರದ ಅಭಿವೃದ್ಧಿ ಮತ್ತು ಜನಪರ ನಿಲುವಿಗೆ ದೊರೆತ ಮನ್ನಣೆಯಾಗಿದೆ ಎಂದು ತಿಳಿಸಿದರು. ಶಬರಿಮಲೆಯಲ್ಲಿ ಸಂಘಟಿತ ದರೋಡೆ ನಡೆದಿದ್ದು, ದೇವಸ್ವಂ ಬೋರ್ಡ್‍ನ ಮಾಜಿ ಅಧ್ಯಕ್ಷನ ಬಂಧನವಾಗಿದ್ದು, ಹಾಲಿ ಅಧ್ಯಕ್ಷ ಇದೇ ಹಾದಿಯಲ್ಲಿರುವುದು ಆತಂಕಕಾರಿಯಾಗಿದೆ.
ಶಬರಿಮಲೆ ಚಿನ್ನ ದರೋಡೆ ಪ್ರಕರಣದಲ್ಲಿ ಕಪ್ಪು ಹಣದ ಪಾತ್ರವಿರುವುದನ್ನು ಜಾರಿ ನಿರ್ದೇಶನಾಲಯ ತನಿಖೆಯಿಂದ ಪತ್ತೆಹಚ್ಚಿರುವುದು ಆಘಾತಕಾರಿಯಾಗಿದೆ. ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿರುವುದು ನಾಚಿಕೆಗೇಡಿನ ವಿಷಯ. ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಮಾಜಿ ಮತ್ತು ಹಾಲಿ ಸಚಿವರ ಪಾತ್ರವನ್ನು ಬಯಲಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ಮುಖಮಡರಾದ ಕೆ. ಶ್ರೀಕಾಂತ್, ಮನು ಬಾಬುರಾಜ್, ಮನುಲಾಲ್‍ಮೇಲತ್, ಪಿ.ಆರ್ ಸುನಿಲ್ ಉಪಸ್ಥಿತರಿದ್ದರು.

