ವಾಷಿಂಗ್ಟನ್: ಸಾಕ್ಷ್ಯಚಿತ್ರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ನಿರೂಪಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸುದ್ದಿಸಂಸ್ಥೆ ಬಿಬಿಸಿ ಮಹಾನಿರ್ದೇಶಕ ಟಿಮ್ ಡೇವಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುದ್ದಿ ಮುಖ್ಯಸ್ಥೆ ಡೆಬೊರಾ ಟರ್ನೆಸ್ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
'ಈ ವಿವಾದವು ನಾವು ಪ್ರೀತಿಸುವ ಸುದ್ದಿಸಂಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಸಂಸ್ಥೆಯ ಮುಖ್ಯಸ್ಥರಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿರುವುದಾಗಿ' ಟಿಮ್ ತಿಳಿಸಿದ್ದಾರೆ.
2021ರ ಜನವರಿ 6ರಂದು ಅಮೆರಿಕ ಕ್ಯಾಪಿಟಲ್ ಹಿಲ್(ಸಂಸತ್) ಮೇಲಿನ ದಾಳಿಗೂ ಮುನ್ನ ಬೆಂಬಲಿಗರನ್ನುದ್ದೇಶಿಸಿ ಟ್ರಂಪ್ ಮಾಡಿದ ಭಾಷಣದ ತುಣುಕನ್ನು ಬಿಬಿಸಿಯು ತನ್ನ ಪನೋರಮಾ ಸಾಕ್ಷ್ಯಚಿತ್ರದಲ್ಲಿ ಬಳಸಿತ್ತು. ಸಾಕ್ಷ್ಯಚಿತ್ರದಲ್ಲಿ ಟ್ರಂಪ್ ಭಾಷಣವನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಿಬಿಸಿ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, ಬಿಬಿಸಿಯನ್ನು ನಕಲಿ ಸುದ್ದಿಗಳ ತಾಣ ಎಂದು ಜರಿದಿದ್ದಾರೆ.
ಏತನ್ಮಧ್ಯೆ, ಮಹಾನಿರ್ದೇಶಕ ಸ್ಥಾನಕ್ಕೆ ಹೊಸಬರು ಆಯ್ಕೆಯಾಗುವವರೆಗೆ ಆ ಸ್ಥಾನದಲ್ಲಿ ಟಿಮ್ ಅವರೇ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

