HEALTH TIPS

ಶಬರಿಮಲೆ ವೃತಾಚರಣೆಯ ಕಪ್ಪು ಬಟ್ಟೆ ಧರಿಸಿ ಶಾಲೆಗೆ ಬರುವುದಕ್ಕೆ ವಿರೋಧ: ಗುರುವಾಯೂರಿನ ಶಾಲೆಯ ಮುಂದೆ ಪ್ರತಿಭಟನೆ

ತ್ರಿಶೂರ್: ಶಬರಿಮಲೆ ವೃತಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಪ್ಪು ಬಟ್ಟೆ ಧರಿಸಿ ಶಾಲೆಗೆ ಬರುವುದಕ್ಕೆ ಸಮವಸ್ತ್ರದ ನೆಪವೊಡ್ಡಿ ವಿರೋಧಿಸಿದ ಹಿನ್ನೆಲೆಯಲ್ಲಿ, ಗುರುವಾಯೂರಿನ ಶ್ರೀ ಗೋಕುಲಂ ಪಬ್ಲಿಕ್ ಶಾಲೆಯ ಮುಂದೆ ಮಂಗಳವಾರ ಹಿಂದೂ ಐಕ್ಯವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಧಾರ್ಮಿಕ ನಂಬಿಕೆಗೆ ಅವಕಾಶ ನೀಡುವಂತೆ, ಶಬರಿಮಲೆಯ ಮಂಡಲ ವೃತಾಚರಣೆಯ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಅನುಮತಿ ನೀಡುವಂತೆ ಅವರು ಆಗ್ರಹಿಸಿದರು.

ನ. 1ರಿಂದ ಶಬರಿಮಲೆ ವೃತಾಚರಣೆ ಮಾಡುವ 3ನೇ ತರಗತಿಯ ಬಾಲಕನಿಗೆ, ಕಪ್ಪು ಬಟ್ಟೆ ಧರಿಸಿಕೊಂಡು ಶಾಲೆಗೆ ಬರಲು ಅವಕಾಶ ನೀಡದ ಕಾರಣದಿಂದ 11 ದಿನಗಳಿಂದ ತರಗತಿಗೆ ಗೈರಾಗಿದ್ದನು. ಶಬರಿಮಲೆಯ ಭಕ್ತರು ವೃತವನ್ನು ಆಚರಿಸುವ ಅವಧಿಯಲ್ಲಿ ಕಪ್ಪು ಅಥವಾ ಗಾಢ ನೀಲಿ ಬಟ್ಟೆ ಧರಿಸುವುದು ಸಂಪ್ರದಾಯ.

"ನಂಬಿಕೆ ಮತ್ತು ಶಿಕ್ಷಣ ಇವೆರಡೂ ವಿದ್ಯಾರ್ಥಿಯ ಹಕ್ಕುಗಳು. ಅವನ್ನು ನಿರಾಕರಿಸಲು ಶಾಲೆಗೆ ಅಧಿಕಾರವಿಲ್ಲ" ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಳೆದ ವರ್ಷಗಳವರೆಗೆ ಗೋಕುಲಂ ಶಾಲೆ ಶಬರಿಮಲೆ ಮಂಡಲ ಋತುವಿನಲ್ಲಿ ಮಕ್ಕಳಿಗೆ ಕಪ್ಪು ಬಟ್ಟೆ ಧರಿಸಲು ಅವಕಾಶ ನೀಡುತ್ತಿತ್ತು. ಹತ್ತು ವರ್ಷಗಳ ಹಿಂದೆ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಆ ಬಳಿಕ ಎಲ್ಲವೂ ಸರಿಯಾಗಿತ್ತು. ಈ ವರ್ಷ ಮಾತ್ರ ಶಾಲೆ ಅಸ್ಪಷ್ಟ ನಿಲುವು ತೆಗೆದುಕೊಂಡಿದೆ ಎಂದು ಬಿಜೆಪಿ ಪವರಟ್ಟಿ-ಗುರುವಾಯೂರು ಮಂಡಲ ಪ್ರಧಾನ ಕಾರ್ಯದರ್ಶಿ ಗಿನೀಶ್ ಪಿ.ಜಿ. ಅವರು ಹೇಳಿದ್ದಾರೆ.

"ನಮ್ಮ ಪ್ರದೇಶದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಆಡಳಿತದ ಶಾಲೆಗಳೂ ಇಂತಹ ನಿರ್ಬಂಧ ಹೇರಿಲ್ಲ. ಮಕ್ಕಳಿಗೆ ಶಿಕ್ಷಣ ನಿರಾಕರಿಸಿರುವುದು ವಿಷಾದನೀಯ" ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಗಿನೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.

"ಶಾಲೆಯ ಸಮವಸ್ತ್ರ ನೀತಿ ಸ್ಪಷ್ಟವಾಗಿದೆ. ವಿದ್ಯಾರ್ಥಿಯು ಅದನ್ನು ಪಾಲಿಸಲೇಬೇಕು. ನಿಯಮ ಉಲ್ಲಂಘನೆಗೆ ಕ್ರಮ ಕೈಗೊಂಡಿದ್ದೇವೆ. ಅದರ ಹೊರತಾಗಿ ಬೇರೇನೂ ನಡೆದಿಲ್ಲ" ಎಂದು ಶಾಲೆಯ ಪ್ರಾಂಶುಪಾಲೆ ಲತಾ ಮಂಜೋ ಅವರು ಪ್ರತಿಕ್ರಿಯಿಸಿದ್ದಾರೆ.

ಹಿಂದೂ ಐಕ್ಯವೇದಿಕೆ ಹಾಗೂ ಶಾಲಾ ಆಡಳಿತ ಮಂಡಳಿಯ ನಡುವೆ ಚರ್ಚೆ ನಡೆದರೂ, ಶಾಲೆ ಕಪ್ಪು ಬಟ್ಟೆಗೆ ಅನುಮತಿ ನೀಡಲು ಸಮ್ಮತಿಸಿಲ್ಲ ಎಂದು ಗಿನೀಶ್ ಹೇಳಿದರು. ವಿದ್ಯಾರ್ಥಿಯ ಪೋಷಕರು ಈಗ ಮಗುವನ್ನು ಬೇರೆ ಶಾಲೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.

ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಹಿಂದೂ ಐಕ್ಯವೇದಿಕೆಯ ನಾಯಕರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries