ಬದಿಯಡ್ಕ: ಪರಿಪೂರ್ಣವಾದ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಲ್ಲಿ ಎಲ್ಲಿಯೂ ಕೊರತೆ ಎಂಬುದು ಕಾಣುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಈ ದೇವಾಲಯದಲ್ಲಿ ಅನೇಕ ಭಕ್ತಜನರ ಧರ್ಮಕಾರ್ಯವನ್ನು ಕಾಣಬಹುದು. ಧಾರ್ಮಿಕ ಕ್ರಿಯೆಗಳು ವ್ಯವಸ್ಥಿತವಾಗಿ ನಡೆಯಬೇಕು. ಕ್ಷೇತ್ರವು ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕವಾಗಿ ಮುಂದುವರಿಯಬೇಕು ಎಂದು ಕ್ಷೇತ್ರದ ಆಚಾರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಬದಿಯಡ್ಕ ಸಮೀಪದ ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಭಾನುವಾರ ಬೆಳಗ್ಗೆ ಜರಗಿದ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಕಾರ್ಯ, ಅನ್ನದಾನ ಹಾಗೂ ಸಮಿತಿಗೆ ಹೊರೆಯಾಗದಂತೆ ಸಾಂಸ್ಕøತಿಕ ಕಾರ್ಯಕ್ರಮವನ್ನು ಜೋಡಿಸಿಕೊಂಡು ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ನಡೆಯಲಿ. ಹಿಂದೂ ಸಮಾಜದಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳುವ ಮನೋಭಾವ ಇದೆ. ಮಾರ್ಚ್ 1ರಿಂದ 9ನೇ ತಾರೀಕಿನ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯುತ್ತದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದರು. ಶ್ಯಾಮ ಭಟ್ ಏತಡ್ಕ, ಕೃಷ್ಣ ಭಟ್ ಅಜ್ಜಿಮೂಲೆ, ಹರಿನಾರಾಯಣ ಶಿರಂತಡ್ಕ, ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಪುರುಷೋತ್ತಮ ಪುಣಿಚಿತ್ತಾಯ, ಚಂದ್ರಶೇಖರ ಭಂಡಾರಿ ಮುನಿಯೂರು, ಎಂ.ಸಿ.ನಾರಾಯಣನ್ ನಾಯರ್ ಮಾತನಾಡಿದರು. ಅನಘ ಎಂ.ಪ್ರಾರ್ಥನೆ ಹಾಡಿದರು. ಮಧುಸೂದನ ಎಂ. ಸ್ವಾಗತಿಸಿ, ಡಿ.ಕೆ.ನಾರಾಯಣನ್ ನಾಯರ್ ವಂದಿಸಿದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
