ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಬೀಚ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 10 ಜನರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಇಲ್ಲಿನ ಬಾಂಡಿ ಬೀಚ್‌ನಲ್ಲಿ ಸಂಜೆ 6.30ರ ಸುಮಾರಿಗೆ ಬಂದೂಕುದಾರಿಗಳು ಸಮುದ್ರ ತೀರದಲ್ಲಿದ್ದ ಜನರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ 10 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಹೂದಿಗಳು ಒಂದು ವಾರ ಆಚರಣೆ ಮಾಡುವ ಹನುಕ್ಕಾ ಹಬ್ಬದ ಮೊದಲ ದಿನವೇ ಈ ಘಟನೆ ನಡೆದಿದೆ. ಈ ಹಬ್ಬದ ಸಂಭ್ರಮಕ್ಕಾಗಿ ಸಾವಿರಾರು ಜನರು ಬೀಚ್‌ನಲ್ಲಿ ಸೇರಿದ್ದರು.
ಘಟನೆ ಕುರಿತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಬೀಚ್‌ನಲ್ಲಿ ಕಂಡ ದೃಶ್ಯಗಳು ಅತ್ಯಂತ ಆಘಾತಕಾರಿ ಹಾಗೂ ಮನಕಲಕುವಂತಿವೆ. ಜನರನ್ನು ಉಳಿಸಲು ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿರುವ ಜನರು ಪೊಲೀಸರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ನಾಗರಿಕರಿಗೆ ಸೂಚನೆ ನೀಡಿದ್ದಾರೆ.
ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹಂತಕರು ಈ ಪ್ರದೇಶದಲ್ಲಿ ಅಡಗಿರುವ ಶಂಕೆ ಇದ್ದು ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

