ಡಹರಾಡೂನ್: ಉತ್ತರಾಖಂಡದ ಮೂರು ಜಿಲ್ಲೆಗಳಲ್ಲಿ ನಡೆದ 'ಆಪರೇಷನ್ ಕಾಲನೇಮಿ' ಕಾರ್ಯಾಚರಣೆ ಅಡಿಯಲ್ಲಿ 19 ಮಂದಿ ಬಾಂಗ್ಲಾ ಪ್ರಜೆಗಳು ಸೇರಿದಂತೆ ಒಟ್ಟು 511 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ವಂಚಿಸುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉತ್ತರಾಖಂಡ ಸರ್ಕಾರ 2025ರ ಜುಲೈನಲ್ಲಿ 'ಆಪರೇಷನ್ ಕಾಲನೇಮಿ' ಕಾರ್ಯಾಚರಣೆ ಆರಂಭಿಸಿದೆ.
ಈ ಕಾರ್ಯಾಚರಣೆ ಅಡಿಯಲ್ಲಿ ಹರಿದ್ವಾರ, ಡೆಹರಾಡೂನ್ ಮತ್ತು ಉಧಮ್ ಸಿಂಗ್ ನಗರದ ವಿವಿಧ ಜಿಲ್ಲೆಗಳಲ್ಲಿ 4,800ಕ್ಕೂ ಹೆಚ್ಚು ಜನರನ್ನು ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 511 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 19 ಬಾಂಗ್ಲಾ ಪ್ರಜೆಗಳೂ ಸೇರಿದ್ದಾರೆ. ಅವರಲ್ಲಿ 10 ಜನರನ್ನು ಬಾಂಗ್ಲಾಕ್ಕೆ ವಾಪಸ್ ಕಳುಹಿಸಲಾಗಿದೆ. ಉಳಿದ 9 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂದು ಮೂಲಗಳು ತಿಳಿಸಿವೆ.
ಈ ಅಭಿಯಾನವು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧವಲ್ಲ, ಬದಲಾಗಿ ಕಾನೂನು, ಸುವ್ಯವಸ್ಥೆ ಮತ್ತು 'ದೇವಭೂಮಿ'ಯ ಘನತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಜನರ ನಂಬಿಕೆಯನ್ನು ಗೌರವಿಸಲಾಗುತ್ತದೆಯಾದರೂ, ಅದರ(ನಂಬಿಕೆ) ಸೋಗಿನಲ್ಲಿ ಅಪರಾಧ, ಬೂಟಾಟಿಕೆ ಮತ್ತು ವಂಚನೆ ಸಹಿಸಲಾಗದು ಎಂದೂ ಧಾಮಿ ಪ್ರತಿಪಾದಿಸಿದ್ದಾರೆ.

