ಸಿರಿಯಾದ (Siriya) ಮಧ್ಯ ಭಾಗದಲ್ಲಿ ಶನಿವಾರಭಾರೀಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಅಮೆರಿಕ ಸೈನಿಕರು ಮತ್ತು ಒಬ್ಬ ನಾಗರಿಕ ಸೇರಿದಂತೆ ಮೂವರು ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಇತರ ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ದಾಳಿಗೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯನ್ನು ಅಮೆರಿಕ ದೂಷಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬಹಳ ಗಂಭೀರ ಪ್ರತೀಕಾರ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಐತಿಹಾಸಿಕ ನಗರ ಪಾಲ್ಮಿರಾ ಬಳಿಯ ಅಸ್ಥಿರ ಪ್ರದೇಶದಲ್ಲಿ ನಡೆದ ಈ ದಾಳಿಯು ಸಿರಿಯಾದಲ್ಲಿ ಅಮೆರಿಕ ಪಡೆಗಳು ಎದುರಿಸುತ್ತಿರುವ ನಿರಂತರ ಅಪಾಯಗಳನ್ನು ಎತ್ತಿ ತೋರಿಸಿದೆ.ಹೀಗಾಗಿ ದಾಳಿಕೋರರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಸಿರಿಯಾದಲ್ಲಿ ಐಸಿಸ್ ಗುಂಪಿನಿಂದ ದಾಳಿ!
ಯುಎಸ್ ಸೆಂಟ್ರಲ್ ಕಮಾಂಡ್ ಪ್ರಕಾರ, ಒಬ್ಬ ಐಸಿಸ್ ಗುಂಪಿನ ಬಂದೂಕುಧಾರಿ ಮಿಲಿಟರಿ ಪೋಸ್ಟ್ ಬಳಿ ಗುಂಡು ಹಾರಿಸಿದ್ದಾನೆ. ದಾಳಿಯ ನಂತರ ಆತನನ್ನು ಕೊಲ್ಲಲಾಗಿದೆ. ಗಾಯಗೊಂಡ ಸೈನಿಕರನ್ನು ಹೆಲಿಕಾಪ್ಟರ್ ಮೂಲಕ ಇರಾಕ್ ಮತ್ತು ಜೋರ್ಡಾನ್ ಗಡಿಯಲ್ಲಿರುವ ಅಲ್-ತನ್ಫ್ ಗ್ಯಾರಿಸನ್‌ಗೆ ಸಾಗಿಸಲಾಗಿದೆ. ಸಾವನ್ನಪ್ಪಿದ ಇಬ್ಬರು ಸೈನಿಕರು ಅಯೋವಾ ರಾಷ್ಟ್ರೀಯ ಗಾರ್ಡ್ ಸದಸ್ಯರು ಎಂದು ರಿಪಬ್ಲಿಕನ್ ಸೆನೆಟರ್ ಜೋನಿ ಅರ್ನ್ಸ್ಟ್ ತಿಳಿಸಿದ್ದಾರೆ. ನಮ್ಮ ಅಯೋವಾ ರಾಷ್ಟ್ರೀಯ ಗಾರ್ಡ್ ಕುಟುಂಬ ನೋವಿನಲ್ಲಿದೆ ಎಂದು ಅವರು ಗಾಯಾಳುಗಳ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ. ಕೊಲ್ಲಲ್ಪಟ್ಟ ನಾಗರಿಕನು ಅಮೆರಿಕ ಪಡೆಗಳೊಂದಿಗೆ ಕೆಲಸ ಮಾಡುತ್ತಿದ್ದ ಭಾಷಾಂತರಕಾರ ಎಂದು ಪೆಂಟಗನ್ ದೃಢಪಡಿಸಿದೆ.
ಕಠಿಣ ಪ್ರತೀಕಾರದ ಎಚ್ಚರಿಕೆ ಕೊಟ್ಟ ಟ್ರಂಪ್!
ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಈ ದಾಳಿಯನ್ನು ಸಿರಿಯಾದ ಅಪಾಯಕಾರಿ ಭಾಗದಲ್ಲಿ ನಡೆದ ಐಎಸ್ ದಾಳಿ ಎಂದು ಬಣ್ಣಿಸಿದ್ದಾರೆ. ಎಫ್‌ಬಿಐ ಸ್ಥಳದಲ್ಲಿದೆ. ದೇವರು ಬಲಿಪಶುಗಳ ಕುಟುಂಬಗಳನ್ನು ಆಶೀರ್ವದಿಸಲಿ" ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಈ ಘಟನೆಯಿಂದ ತೀವ್ರವಾಗಿ ಪ್ರಭಾವಿತರಾಗಿದ್ದಾರೆ ಎಂದು ತಿಳಿಸಿದ್ದಾರೆ. "ಅಲ್-ಶರಾ ಅತ್ಯಂತ ಕೋಪಗೊಂಡಿದ್ದಾರೆ ಮತ್ತು ತೊಂದರೆಗೀಡಾಗಿದ್ದಾರೆ" ಎಂದು ಟ್ರಂಪ್ ಹೇಳಿದರು.
ಸಿರಿಯನ್ ಅಧಿಕಾರಿಗಳ ಪ್ರಕಾರ, ದಾಳಿಕೋರ ಐಸಿಸ್ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿದ್ದು, ಸಿರಿಯಾದ ಆಂತರಿಕ ಭದ್ರತಾ ಪಡೆಗಳ ಸದಸ್ಯನಾಗಿದ್ದ. ಹಿಂದೆ ಆತನ ಉಗ್ರಗಾಮಿ ದೃಷ್ಟಿಕೋನದ ಬಗ್ಗೆ ಕಳವಳ ವ್ಯಕ್ತವಾಗಿತ್ತು ಆದರೆ ಕ್ರಮ ತೆಗೆದುಕೊಳ್ಳಲಾಗಿರಲಿಲ್ಲ. ದಾಳಿಯಲ್ಲಿ ಸಿರಿಯನ್ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಸಿರಿಯಾ ಅಧ್ಯಕ್ಷರ ನಿಯಂತ್ರಣವಿಲ್ಲದ ಪ್ರದೇಶದಲ್ಲಿ ದಾಳಿ ನಡೆದಿದೆ ಎಂದು ಪೆಂಟಗನ್ ತಿಳಿಸಿದೆ.
ಸಿರಿಯಾದಲ್ಲಿ ಅಮೆರಿಕದ ನೂರಾರು ಸೈನಿಕರಿಂದ ಕಾರ್ಯ!
ಒಂದು ವರ್ಷ ಹಿಂದೆ ಬಶರ್ ಅಸ್ಸಾದ್ ಪತನದ ನಂತರ ಸಿರಿಯಾದಲ್ಲಿ ಅಮೆರಿಕ ಸಿಬ್ಬಂದಿ ಸಾವನ್ನಪ್ಪಿದ ಮೊದಲ ದಾಳಿ ಇದಾಗಿದೆ. ಅಂದಿನಿಂದ ವಾಷಿಂಗ್ಟನ್ ಮತ್ತು ಡಮಾಸ್ಕಸ್ ನಡುವಿನ ಸಂಬಂಧಗಳು ಸುಧಾರಿಸಿವೆ. ಅಮೆರಿಕ ದೀರ್ಘಕಾಲದ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕಳೆದ ತಿಂಗಳು ಅಧ್ಯಕ್ಷ ಅಲ್-ಶರಾ ಶ್ವೇತಭವನಕ್ಕೆ ಭೇಟಿ ನೀಡಿದ್ದರು. ಐಎಸ್ ವಿರುದ್ಧ ಹೋರಾಡುವ ಅಂತರರಾಷ್ಟ್ರೀಯ ಒಕ್ಕೂಟದ ಭಾಗವಾಗಿ ಅಮೆರಿಕ ಪೂರ್ವ ಸಿರಿಯಾದಲ್ಲಿ ನೂರಾರು ಸೈನಿಕರನ್ನು ನಿರ್ವಹಿಸುತ್ತಿದೆ.
ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು "ಅಮೆರಿಕನ್ನರನ್ನು ಗುರಿಯಾಗಿಸಿಕೊಂಡ ಯಾರನ್ನಾದರೂ ಬೇಟೆಯಾಡಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯು ಸಿರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಪಡೆಗಳಿಗೆ ನಿರಂತರ ಅಪಾಯವಿದೆ ಎಂಬುದನ್ನು ಎತ್ತಿ ತೋರಿಸಿದೆ. 2019ರಲ್ಲಿ ಮನ್ಬಿಜ್‌ನಲ್ಲಿ ನಡೆದ ಮಾರಕ ದಾಳಿ ಸೇರಿ ಹಿಂದೆಯೂ ಅಮೆರಿಕ ಪಡೆಗಳನ್ನು ಗುರಿಯಾಗಿಸಲಾಗಿತ್ತು.
ಈ ಘಟನೆಯು ಅಮೆರಿಕ-ಸಿರಿಯಾ ಸಂಬಂಧಗಳ ಮೇಲೆ ಪರಿಣಾಮ ಬೀಳಬಹುದು. ಟ್ರಂಪ್ ಅವರ ಕಠಿಣ ನಿಲುವು ಮತ್ತು ಪ್ರತೀಕಾರದ ಎಚ್ಚರಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಹೊಸ ಉದ್ವಿಗ್ನತೆಗೆ ಕಾರಣವಾಗಬಹುದು.

