HEALTH TIPS

ಕೇರಳದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೆನ್ಸಾರ್‌ ಕರಿನೆರಳು: ಫೆಲೆಸ್ತೀನ್‌ನ 4 ಚಿತ್ರಗಳು ಸೇರಿದಂತೆ 19 ಸಿನಿಮಾ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ

ತಿರುವನಂತಪುರಂ: ಕೇರಳದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFK) 30ನೇ ಆವೃತ್ತಿಗೆ ಸೆನ್ಸಾರ್‌ ಕರಿ ನೆರಳು ಬಿದ್ದಿದೆ. ಕೇಂದ್ರ ಸರಕಾರ 19 ಚಲನಚಿತ್ರಗಳಿಗೆ ಸೆನ್ಸಾರ್ ವಿನಾಯಿತಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಇದರಲ್ಲಿ ಫೆಲೆಸ್ತೀನ್‌ನ 4 ಚಿತ್ರಗಳು ಸೇರಿವೆ.

ಕೇಂದ್ರ ಸರಕಾರದ ಈ ನಿರ್ಧಾರ ಹಲವು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮುಖಂಡರ ಟೀಕೆಗೆ ಗುರಿಯಾಗಿದೆ. ಸಿಪಿಎಂ ಜನರಲ್ ಸೆಕ್ರೆಟರಿ ಎಂ.ಎ.ಬೇಬಿ, ಹಿರಿಯ ಚಿತ್ರ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಮತ್ತು ಟಿ.ವಿ. ಚಂದ್ರನ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಖಂಡಿಸಿದ್ದಾರೆ.

ಸೆನ್ಸಾರ್‌ ಅನುಮತಿ ಪಡೆಯದ ಕಾರಣ ಕಳೆದ ಎರಡು ದಿನಗಳಲ್ಲಿ ಪ್ರದರ್ಶನಗೊಳ್ಳಬೇಕಿದ್ದ ಕನಿಷ್ಠ 7 ಚಿತ್ರಗಳು ಮತ್ತು ಮಂಗಳವಾರಕ್ಕೆ ನಿಗದಿಯಾಗಿದ್ದ 8 ಚಿತ್ರಗಳ ಪ್ರದರ್ಶನ ರದ್ದುಗೊಳಿಸಬೇಕಾಗಿದೆ ಎಂದು ಚಲನಚಿತ್ರ ಅಕಾಡೆಮಿ ಅಧಿಕಾರಿಗಳು ಹೇಳಿದ್ದಾರೆ.

ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಚಿತ್ರಗಳಿಗೆ ಸೆನ್ಸಾರ್ ಪ್ರಮಾಣಪತ್ರ ಅಥವಾ ಕೇಂದ್ರ ಸರಕಾರದಿಂದ ನೀಡಿದ ಸೆನ್ಸಾರ್ ವಿನಾಯಿತಿ ದಾಖಲೆ ಕಡ್ಡಾಯವಾಗಿದೆ.

ಅಕಾಡೆಮಿ ಅಧಿಕಾರಿಗಳ ಪ್ರಕಾರ, ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಪ್ರಸ್ತಾವಿಸಲಾದ ಸುಮಾರು 180 ಚಿತ್ರಗಳಿಗೆ ಅನುಮತಿ ಕೋರಲಾಗಿತ್ತು. ಆದರೆ ಕೇವಲ 164 ಚಿತ್ರಗಳಿಗೆ ಮಾತ್ರ ಅನುಮತಿ ದೊರಕಿದೆ. ಅನುಮತಿ ದೊರೆಯದ ಫೆಲೆಸ್ತೀನ್ ಚಿತ್ರಗಳಲ್ಲಿ 'ಫೆಲೆಸ್ತೀನ್ 36'; 2017ರ ಐಎಫ್‌ಎಫ್‌ಕೆಯಲ್ಲಿ ಗೋಲ್ಡನ್ ಕ್ರೌ ಫೆಸೆಂಟ್ ಪ್ರಶಸ್ತಿ ಗೆದ್ದ 'ವಾಜಿಬ್'; 'ಆಲ್ ದಟ್ಸ್ ಲೆಫ್ಟ್ ಆಫ್ ಯು'; ಮತ್ತು 'ಒನ್ಸ್ ಅಪಾನ್ ಎ ಟೈಮ್ ಇನ್ ಗಾಝಾ' ಸೇರಿವೆ. ಗಮನಾರ್ಹವಾಗಿ ಫೆಲೆಸ್ತೀನ್ ಮಗುವಿನ ಪ್ರಯಾಣವನ್ನು ಚಿತ್ರಿಸುವ ಇಸ್ರೇಲಿ ನಿರ್ಮಿತ ಚಿತ್ರ 'ದಿ ಸೀ' ಚಿತ್ರಕ್ಕೆ ಅನುಮತಿ ನೀಡಲಾಗಿದೆ.

ಈ ವರ್ಷದ ಐಎಫ್‌ಎಫ್‌ಕೆ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಗೆದ್ದ ಅಬ್ದೆರ್ರಹ್ಮನೆ ಸಿಸಾಕೊ ಅವರ 'ಟಿಂಬಕ್ಟು', ಸ್ಪ್ಯಾನಿಷ್ ಚಲನಚಿತ್ರ 'ಬೀಫ್', ಶ್ರೀಲಂಕಾದ ಚಲನಚಿತ್ರ 'ರಿವರ್‌ಸ್ಟೋನ್', ಅರ್ಜೆಂಟೀನಾದ ಚಲನಚಿತ್ರ 'ದಿ ಅವರ್ ಆಫ್ ದಿ ಫರ್ನೇಸಸ್' ' ಐಎಫ್‌ಎಫ್‌ಕೆಯಲ್ಲಿ ಅನುಮತಿ ದೊರೆಯದ ಇತರ ಕೆಲವು ಚಲನ ಚಿತ್ರಗಳಾಗಿವೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಪಿಎಂ ಜನರಲ್ ಸೆಕ್ರೆಟರಿ ಎಂ.ಎ.ಬೇಬಿ, ಸಂಘ ಪರಿವಾರದ ಕಾರ್ಯಸೂಚಿಯ ಭಾಗವಾಗಿ ಚಲನ ಚಿತ್ರೋತ್ಸವವನ್ನು ಹಾಳುಮಾಡಲು ಈ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries