ಸಿಡ್ನಿ: ಇಲ್ಲಿನ ಬೋಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ, ಶಂಕಿತ ಆರೋಪಿ ವಿರುದ್ಧ 15 ಕೊಲೆ ಪ್ರಕರಣ ಸೇರಿ ಒಟ್ಟು 59 ಪ್ರಕರಣಗಳನ್ನು ದಾಖಲಿಸಲಾಗಿದೆ.
ಬೀಚ್‌ನಲ್ಲಿ ಡಿ.14ರಂದು 'ಹನುಕ್ಕಾ' ಯಹೂದಿ ಹಬ್ಬದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಸಂಖ್ಯೆಯ ಜನರ ಮೇಲೆ ಆರೋಪಿಗಳಾದ ಸಾಜಿದ್ ಅಕ್ರಂ (50) ಮತ್ತು ನವೀದ್ ಅಕ್ರಂ (24) ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.
ಸಾಜಿದ್‌ನನ್ನು ಪೊಲೀಸರು ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಒಟ್ಟು 16 ಮಂದಿ ಘಟನೆಯಲ್ಲಿ ಮೃತಪಟ್ಟಿದ್ದರು.
ಗುಂಡೇಟಿನಿಂದ ಕೋಮಾಕ್ಕೆ ಜಾರಿ, ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಜಿದ್ ಪುತ್ರ ನವೀದ್ ಅಕ್ರಂ ಬುಧವಾರ ಬಿಡುಗಡೆಯಾಗಿದ್ದು, ಈತನ ವಿರುದ್ಧ ಆಸ್ಪ್ರೇಲಿಯಾ ಪೊಲೀಸರು ಕೊಲೆ ಮತ್ತು ಭಯೋತ್ಪಾದನಾ ಕೃತ್ಯ ಸೇರಿ ಒಟ್ಟು 59 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ನವೀದ್ ತಂದೆ, ಸಾಜಿದ್ ಅಕ್ರಂ ವಿರುದ್ಧವೂ ಕೊಲೆ, ಕೃತ್ಯ ನಡೆದ ಸ್ಥಳದಲ್ಲಿ ಸ್ಫೋಟಕ ಇರಿಸಿದ ಆರೋಪ ಸೇರಿ 40 ಪ್ರಕರಣಗಳನ್ನು ದಾಖಲಿಸಲಾಗಿದೆ.
ನೆರವೇರಿದ ಅಂತ್ಯಕ್ರಿಯೆ...
ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ಬುಧವಾರ ನೆರವೇರಿದ್ದು, ಯಹೂದಿ ಆಸ್ಟ್ರೇಲಿಯನ್ನರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯನ್ನು ಇಡೀ ವಿಶ್ವವೇ ಖಂಡಿಸಿದೆ. ಯಹೂದಿಗಳಲ್ಲಿ ಮೃತರ ಅಂತ್ಯಕ್ರಿಯೆ 24 ಗಂಟೆಗಳ ಒಳಗಾಗಿ ನಡೆಸಲಾಗುತ್ತದೆ. ಆದರೆ, ಪೊಲೀಸ್ ತನಿಖೆಯ ಕಾರಣದಿಂದ ಅಂತ್ಯಕ್ರಿಯೆ ಎರಡು ದಿನ ವಿಳಂಬ ಆಗಿತ್ತು. ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
'ಆಸ್ಟ್ರೇಲಿಯಾದಲ್ಲಿ ಭಯೋತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ' ಎಂಬ ಕಳವಳ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ 10 ವರ್ಷದ ಬಾಲಕಿ, 87 ವರ್ಷದ ವ್ಯಕ್ತಿಯೂ ಇದ್ದಾರೆ. ಅಂತ್ಯಕ್ರಿಯೆ ಬೆನ್ನಲ್ಲೇ, ಸಿಡ್ನಿಯಲ್ಲಿ ಯಹೂದಿ ಆಸ್ಟ್ರೇಲಿಯನ್ನರು ಶ್ರದ್ಧಾಂಜಲಿ ಸಭೆ ನಡೆಸಿದರು. ಯಹೂದಿಯರ ವಿರುದ್ಧದ ಭಯೋತ್ಪಾದನೆಯನ್ನು ಖಂಡಿಸಿದರು.
ಭಯೋತ್ಪಾದಕ ನಂಟಿನ ತನಿಖೆ
ಪೊಲೀಸರ ವಶದಲ್ಲಿರುವ ನವೀದ್ ಅಕ್ರಂಗೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಜತೆಗೆ ಇರುವ ನಂಟು ಮತ್ತು ಆತ ಕಳೆದ ನವೆಂಬರ್‌ನಲ್ಲಿ ಫಿಲಿಪ್ಪೀನ್ಸ್‌ಗೆ ಭೇಟಿ ನೀಡಿದ್ದರ ಕುರಿತು ಆಸ್ಟ್ರೇಲಿಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನವೀದ್ ಫಿಲಿಪ್ಪೀನ್ಸ್‌ಗೆ ಭೇಟಿ ನೀಡಿರುವುದನ್ನು ಅಲ್ಲಿನ ವಲಸೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಮುಸ್ಲಿಂ ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪಿನ ಮುಖಂಡ ಅಬು ಸಯ್ಯಾಫ್ ಸಕ್ರಿಯವಾಗಿದ್ದು ನವೀದ್ ಈತನನ್ನು ಭೇಟಿಯಾಗಿದ್ದಾನೆಯೇ ಎನ್ನುವುದರ ಕುರಿತೂ ತನಿಖೆ ನಡೆಯುತ್ತಿದೆ.

