ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು 2024-25ನೇ ಆರ್ಥಿಕ ವರ್ಷದಲ್ಲಿ ಸ್ವೀಕರಿಸಿರುವ ದೇಣಿಗೆ ಪ್ರಮಾಣವು ಹಿಂದಿನ ಸಾಲಿಗೆ ಹೋಲಿಸಿದರೆ ಭಾರಿ ಎನ್ನುವಷ್ಟು ಹೆಚ್ಚಾಗಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳಿಗೆ ದೊರೆತ ದೇಣಿಗೆ ಪ್ರಮಾಣವು ಗಣನೀಯವಾಗಿ ಕುಸಿದಿದೆ.
ಪಕ್ಷಗಳು ಚುನಾವಣಾ ಆಯೊಗಕ್ಕೆ ಸಲ್ಲಿಸಿರುವ ಅಂಕಿ-ಅಂಶಗಳ ಪ್ರಕಾರ, 2023-24ನೇ ಸಾಲಿಗೆ ಹೋಲಿಸಿದರೆ, ಆಡಳಿತಾರೂಢ ಪಕ್ಷಕ್ಕೆ ದೊರೆತ ದೇಣಿಗೆ ಪ್ರಮಾಣ ಶೇ 53ರಷ್ಟು ಅಧಿಕಗೊಂಡಿದೆ.
2023-24ರಲ್ಲಿ ₹ 3,967 ಕೋಟಿ ಪಡೆದಿದ್ದ ಬಿಜೆಪಿ, 2024-25ರಲ್ಲಿ ಶೇ 53ರಷ್ಟು ಅಧಿಕ ಅಂದರೆ ಒಟ್ಟು ₹ 6,088 ಕೋಟಿ ದೇಣಿಗೆ ಪಡೆದಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದ ದೇಣಿಗೆ ಮೊತ್ತವು ₹ 1,129.66 ಕೋಟಿಯಿಂದ ₹ 522.13 ಕೋಟಿಗೆ ಇಳಿದಿದೆ. ಹೀಗಾಗಿ, ಕಾಂಗ್ರೆಸ್ಗೆ ದೊರೆತಿರುವ ದೇಣಿಗೆಗೆ ಹೋಲಿಸಿದರೆ ಬಿಜೆಪಿಗೆ 12 ಪಟ್ಟು ಅಧಿಕ ಸಿಕ್ಕಿದೆ.
ಬಿಜೆಪಿಯು ತಾನು ಪಡೆದ ದೇಣಿಗೆ ಹಾಗೂ ಮಾಡಿರುವ ಖರ್ಚಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದೆಯಾದರೂ, ಅದರ ಮಾಹಿತಿ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
ಕಾಂಗ್ರೆಸ್ ಪಕ್ಷ 2024-25ರಲ್ಲಿ ₹ 1,111.94 ಕೋಟಿ ಖರ್ಚು ಮಾಡಿದ್ದು, ಅದರಲ್ಲಿ ₹ 896.22 ರಷ್ಟನ್ನು ಚುನಾವಣೆಗಳಿಗಾಗಿ ವ್ಯಯಿಸಿರುವುದಾಗಿ ಲೆಕ್ಕ ನೀಡಿದೆ.
ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ದೊರೆತಿರುವ ದೇಣಿಗೆ ಮೊತ್ತ ₹ 646.39 ಕೋಟಿಯಿಂದ ₹ 184.08 ಕೋಟಿಗೆ ಇಳಿದಿದೆ. ಆದಾಗ್ಯೂ ₹ 227.59 ಕೋಟಿಯಷ್ಟನ್ನು ಪ್ರಸಕ್ತ ಸಾಲಿನಲ್ಲಿ ವ್ಯಯಿಸಿದೆ. ಚುನಾವಣೆಗಾಗಿ ₹ 137.58 ಕೋಟಿ ಖರ್ಚು ಮಾಡಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ದೇಣಿಗೆ ₹ 184.11 ಕೋಟಿಯಿಂದ ₹ 140.05 ಕೋಟಿಗೆ ಕುಸಿದಿದೆ. ಚುನಾವಣೆಗಳಿಗಾಗಿ ₹ 299.92 ಖರ್ಚು ಮಾಡಿರುವುದಾಗಿ ಲೆಕ್ಕ ನೀಡಿದೆ.
ಟಿಡಿಪಿಗೆ ದೊರೆತ ದೇಣಿಗೆ ಮೊತ್ತ ₹ 274.65 ಕೋಟಿಯಿಂದ ₹ 83.03ಗೆ ಇಳಿದಿದೆ. ₹ 245.5 ಕೋಟಿ ಇದ್ದ ಬಿಜೆಡಿಯ ದೇಣಿಗೆ ಮೊತ್ತ ₹ 60 ಕೋಟಿಗೆ ಕುಸಿತ ಕಂಡಿದೆ.
ಸಿಪಿಐ(ಎಂಎಲ್) ಪಕ್ಷಕ್ಕೆ ದೊರೆತ ದೇಣಿಗೆ ಪ್ರಮಾಣ ಭಾರಿ ಏರಿಕೆ ಕಂಡಿದೆ. ಕಳೆದ ವರ್ಷ ಕೇವಲ ₹ 94.63 ಲಕ್ಷ ಪಡೆದಿದ್ದ ಈ ಪಕ್ಷ ಈ ಬಾರಿ ₹ 2.98 ಕೋಟಿ ಸ್ವೀಕರಿಸಿದೆ. ಅದರಲ್ಲಿ, ₹ 1.69 ಕೋಟಿಯನ್ನು ಚುನಾವಣೆಗಳಿಗಾಗಿ ಖರ್ಚು ಮಾಡಿದೆ.
ಜೆಡಿಯು ಪಕ್ಷದ ದೇಣಿಗೆ ಮೊತ್ತ ₹ 4.35 ಕೋಟಿಯಿಂದ ₹ 18.69 ಕೋಟಿಗೆ ಏರಿದೆ. ಸಮಾಜವಾದಿ ಪಕ್ಷಕ್ಕೆ ₹ 48.22 ಲಕ್ಷ ಇದ್ದ ದೇಣಿಗೆ ಈ ಬಾರಿ ₹ 93.47 ಲಕ್ಷಕ್ಕೆ ಏರಿದೆ.

