ನವದೆಹಲಿ: ಹಣ ಪಾವತಿಸಿ ವಿಶೇಷ ಪೂಜೆ ಹೆಸರಿನಲ್ಲಿ ಶ್ರೀಮಂತರಿಂದ ದೇವರ ಶೋಷಣೆಯಾಗುತ್ತಿದೆ ಎಂದು ಸುಪ್ರೀಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಶ್ರೀ ಕೃಷ್ಣನ ಆರಾಧನಾ ಸ್ಥಳವಾದ ಬಂಕೆ ಬಿಹಾರಿಜೀ ದೇಗುಲದಲ್ಲಿ ನ್ಯಾಯಾಲಯ ರಚಿಸಿದ್ದ ಸಮಿತಿ ನಿಗದಿಪಡಿಸಿದ್ದ ದರ್ಶನ ಸಮಯ ಮತ್ತು ದೇಗುಲ ಪದ್ದತಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿ ಕುರಿತಂತೆ ಉನ್ನತಾಧಿಕಾರ ಹೊಂದಿರುವ ದೇವಾಲಯ ನಿರ್ವಹಣಾ ಸಮಿತಿ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸುಪ್ರೀಂಕೋರ್ಟ್ ನೇಮಿಸಿದ ದೇವಾಲಯ ನಿರ್ವಹಣಾ ಸಮಿತಿ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಮಚೋಲಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು, ಪ್ರಕರಣದ ಮುಂದಿನ ವಿಚಾರಣೆ ಜನವರಿ ಮೊದಲ ವಾರದಲ್ಲಿ ನಡೆಸಲು ಪಟ್ಟಿ ಮಾಡಿತು.
ಮಧ್ಯಾಹ್ನ 12 ಗಂಟೆಗೆ ದೇವಸ್ಥಾನ ಮುಚ್ಚಿದ ನಂತರವೂ ದೇವರಿಗೆ ಒಂದು ನಿಮಿಷವೂ ವಿಶ್ರಾಂತಿ ನೀಡುವುದಿಲ್ಲ. ಆ ವೇಳೆ ದೇವರನ್ನು ಹೆಚ್ಚು ಶೋಷಣೆ ಮಾಡಲಾಗುತ್ತಿದೆ. ಭಾರೀ ಹಣ ಪಾವತಿಸಬಲ್ಲ ಶ್ರೀಮಂತರಿಗೆ ವಿಶೇಷ ಪೂಜೆಗೆ ಅವಕಾಶ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

