ಪೆರ್ಲ: ಭಕ್ತರು ನೀಡುವ ಕಾಣಿಕೆ ದೈವ, ದೇವಸ್ಥಾನಗಳ ಸಾನ್ನಿಧ್ಯ ವೃದ್ಧಿ ಜತೆಗೆ ಆರಾಧನಾಲಯಗಳ ಅಭಿವೃದ್ಧಿಗೆ ಸಹಕಾರಿಯಾಗುವುದಾಗಿ ಎಡನಿರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ಸ್ವರ್ಗ ಮಲೆತ್ತಡ್ಕ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸುವರ್ಣ ರಜತನಿಧಿ ಸಮರ್ಪಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನಿಡಿದರು.
ದೇವರು ನಮಗೆ ಒದಗಿಸಿದ ಸಂಪತ್ತಿನ ಒಂದಂಶವನ್ನು ದೇವರಿಗೇ ಸಮರ್ಪಿಸುವ ಮೂಲಕ ನಾವು ಕೃತಾರ್ಥರಾಗಬೇಕಾಗಿದೆ. ಜಗದ ಜನನಿ ಶ್ರೀದುರ್ಗೆಯ ಆರಾಧನೆ ಸಕಲ ಜೀವರಾಶಿಯ ಸನ್ಮಂಗಲಕ್ಕೆ ಕಾರಣವಾಗುವುದು. ಕ್ಷೇತ್ರದಲ್ಲಿ ಶ್ರೀದುರ್ಗಾಪರಮೇಶ್ವರಿಯ ಭವ್ಯ ದೇಗುಲದ ನಿರ್ಮಾಣ ಕಾರ್ಯ ಶೀಘ್ರ ನೆರವೇರುವಂತಾಗಲು ಭಕ್ತಾದಿಗಳ ಸಹಕಾರ ಅಗತ್ಯ. ಈ ಮಂಗಲ ಕಾರ್ಯ ಶೀಘ್ರ ನೆರವೇರಲಿ ಎಂದು ಹಾರೈಸಿದರು.
ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ಷೇತ್ರ ತಂತ್ರಿವರ್ಯ ನಾರಾಯಣ ಭಟ್ ಕೊರೆಕ್ಕಾನ, ಶ್ರಿಕ್ಷೇತ್ರದ ಅನುವಂಶಿಕ ಪ್ರಾಣರಾದ ಮಾಧವ ಭಟ್ ಬೆಲ್ಲ, ಆರೆಸ್ಸೆಸ್ ಕುಟುಂಬ ಪ್ರಭೋಧನ್‍ನ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಆಟಿಕುಕ್ಕೆ ವೆಂಕಟೇಶ ಭಟ್, ಎಣ್ಮಕಜೆ ಗ್ರಾಪಂ ಮಾಜಿ ಅಧ್ಯಕ್ಷ ಸೋಮಶೇಖರ ಜೆ.ಎಸ್, ಕ್ಯಾಂಪ್ಕೋ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಕೋಳಾರು, ಪತ್ತಡ್ಕ ಗಣಪತಿ ಭಟ್, ವೇಣು ಕಳೆಯತ್ತೋಡಿ, ಡಾ. ಶ್ರೀಪತಿ ಕಜಂಪಾಡಿ, ಸದಾನಂದ ಶೆಟ್ಟಿಕುದ್ವ, ರಾಜಾರಾಂ ಎಸ್. ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಕೆ.ವೈ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


