ನವದೆಹಲಿ: ಹೊಸ ಮಸೂದೆಗಳ ಶೀರ್ಷಿಕೆಯಲ್ಲಿ ಹಿಂದಿ ಬಳಕೆ ಹೆಚ್ಚಿರುವ ಕುರಿತಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಇದು ಹಿಂದಿ ಮಾತನಾಡದ ಜನರಿಗೆ ಅಪಮಾನ ಎಂದಿದ್ದಾರೆ.
ಮಸೂದೆ ಅಥವಾ ಕಾಯ್ದೆಗಳ ಹಿಂದಿ ಹೆಸರನ್ನು ಇಂಗ್ಲಿಷ್ ಪದಗಳನ್ನು ಬಳಸಿ ಬರೆಯಲಾಗುತ್ತಿದ್ದು, ಹಿಂದಿ ಭಾಷಿಕರಲ್ಲದ ಜನರ ಹೆಸರಿನ ಮೂಲಕ ಮಸೂದೆಯನ್ನು ಅರ್ಥ ಮಾಡಿಕೊಳ್ಳಲಾರರು ಎಂದಿದ್ದಾರೆ.
ಸಂಸತ್ತಿನಲ್ಲಿ ಮಂಡಿಸುವ ಮಸೂದೆಗಳ ಹೆಸರಲ್ಲಿ ಹಿಂದಿ ಭಾಷೆಯ ಪದಗಳನ್ನು ಇಂಗ್ಲಿಷ್ನಲ್ಲಿ ಬರೆಯುವುದು ಹೆಚ್ಚಾಗಿದ್ದು, ಇದನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.
ಇಲ್ಲಿಯವರೆಗೆ, ಮಸೂದೆಯ ಶೀರ್ಷಿಕೆಯನ್ನು ಇಂಗ್ಲಿಷ್ ಆವೃತ್ತಿಯಲ್ಲಿ ಇಂಗ್ಲಿಷ್ ಪದಗಳಲ್ಲಿ ಮತ್ತು ಹಿಂದಿ ಆವೃತ್ತಿಯಲ್ಲಿ ಹಿಂದಿ ಪದಗಳಲ್ಲಿ ಬರೆಯುವುದು ಪದ್ಧತಿಯಾಗಿತ್ತು. 75 ವರ್ಷಗಳ ಈ ರೂಢಿಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದಾಗ, ಸರ್ಕಾರ ಏಕೆ ಬದಲಾವಣೆ ಮಾಡಬೇಕು ಎಂದುಅವರು ಪ್ರಶ್ನಿಸಿದ್ದಾರೆ.
'ಈ ಬದಲಾವಣೆಯು ಹಿಂದಿ ಮಾತನಾಡದ ಜನರಿಗೆ ಮತ್ತು ಹಿಂದಿ ಹೊರತುಪಡಿಸಿ ಬೇರೆ ಅಧಿಕೃತ ಭಾಷೆಯನ್ನು ಮಾತನಾಡುವ ರಾಜ್ಯಗಳಿಗೆ ಅವಮಾನವಾಗಿದೆ'ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಇಂಗ್ಲಿಷ್ ಸಹಾಯಕ ಅಧಿಕೃತ ಭಾಷೆಯಾಗಿ ಮಾತ್ರ ಉಳಿಯುತ್ತದೆ ಎಂಬ ಭರವಸೆಯನ್ನು ಹಿಂದಿನ ಸರ್ಕಾರಗಳು ನೀಡಿದ್ದವು. ಆ ಭರವಸೆ ಅಪಾಯದಲ್ಲಿರುವ ಆತಂಕ ಕಾಡುತ್ತಿದೆ ಎಂದು ಚಿದಂಬರಂ ಹೇಳಿದ್ದಾರೆ.

