ಮುಳ್ಳೇರಿಯ: ಸಿಪಿಎಂನ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ದೇಲಂಪಾಡಿಯಲ್ಲಿ ಬಂಡಾಯ ಅಭ್ಯರ್ಥಿಗಳು ಗಳಿಸಿದ ಜಯವನ್ನು ಐಕ್ಯರಂಗ ಸದುಪಯೋಗಪಡಿಸಿಕೊಳ್ಳುತ್ತಿದೆ. ಸಿಪಿಎಂ ಬಂಡಾಯ ಅಭ್ಯರ್ಥಿಗಳನ್ನು ಜೊತೆಗೆ ಸೇರಿಸಿಕೊಂಡು ಸ್ಪರ್ಧೆಗೆ ಇಳಿದ ಯುಡಿಎಫ್ ಒಟ್ಟು 17 ಸೀಟುಗಳಲ್ಲಿ 7 ಸೀಟುಗಳನ್ನು ಮಾತ್ರವೇ ಗಳಿಸಿದೆಯಾದರೂ ಅತ್ಯಂತ ದೊಡ್ಡ ಒಕ್ಕೂಟವಾಗಿ ಮೂಡಿಬಂದಿದೆ. 6 ಮಂದಿ ಸ್ವತಂತ್ರರನ್ನು ರಂಗಕ್ಕಿಳಿಸಿದಾಗ ಮೂರು ಮಂದಿಯನ್ನು ಮಾತ್ರವೇ ಜಯಗಳಿಸುವಂತೆ ಮಾಡಲು ಸಾಧ್ಯವಾಗಿದೆ.
ಸಿಪಿಎಂ ಬಿಟ್ಟು ಐಕ್ಯರಂಗದ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜಯಗಳಿಸಿದ ಇಬ್ಬರು ಮುಖಂಡರು ಭಾರೀ ಬಹುಮತದೊಂದಿಗೆ ಜಯಗಳಿಸಿದ್ದಾರೆ. ಇದು ಸಿಪಿಎಂಗೆ ಹೊಡೆತ ನೀಡಿತು. ಚುನಾವಣೆಯಲ್ಲಿ ಗಮನಾರ್ಹ ಸ್ಪರ್ಧೆ ದೇಲಂಪಾಡಿಯಲ್ಲಿ ನಡೆದಿರುವುದಾಗಿತ್ತು. ದೇಲಂಪಾಡಿ ವಾರ್ಡ್‍ನಿಂದ ಐಕ್ಯರಂಗದ ಬೆಂಬಲದೊಂದಿಗೆ ಸ್ಪರ್ಧಿಸಿದ ಸಿಪಿಎಂನ ಮಾಜಿ ಏರಿಯಾ ಸಮಿತಿ ಸದಸ್ಯ ಹಾಗೂ ಪಂಚಾಯತಿ ಅಧ್ಯಕ್ಷರಾಗಿದ್ದ ಎ. ಮುಸ್ತಫ ಹಾಜಿ 177 ಮತದ ಅಂತರದೊಂದಿಗೆ ಜಯ ಗಳಿಸಿದ್ದಾರೆ. ಸ್ವತಂತ್ರರ ಬೆಂಬಲದೊಂದಿಗೆ ಯುಡಿಎಫ್ ದೇಲಂಪಾಡಿಯಲ್ಲಿ ಆಡಳಿತಕ್ಕೇರಲು ಸಾಧ್ಯತೆ ಇದೆ. ಮುಸ್ತಫ ಹಾಜಿ ಅಧ್ಯಕ್ಷರಾಗಬಹುದೆನ್ನಲಾಗಿದೆ. 2015-20 ರ ಕಾಲಾವಧಿಯಲ್ಲಿ ಸಿಪಿಎಂನ ಅಧ್ಯಕ್ಷರಾಗಿದ್ದರು. ಕಳೆದ 25 ವರ್ಷಗಳಿಂದ ಸಿಪಿಎಂ ಆಡಳಿತ ನಡೆಸುವ ದೇಲಂಪಾಡಿ ಪಂಚಾಯತಿಯಲ್ಲಿ ಅಧ್ಯಕ್ಷ ಅಭ್ಯರ್ಥಿಯಾಗಿದ್ದ ಎ. ಚಂದ್ರಶೇಖರರನ್ನು 229 ಮತಗಳ ಅಂತರದಿಂದ ಐಕ್ಯರಂಗದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಿಪಿಎಂ ಪಾಂಡಿ ಲೋಕಲ್ ಮಾಜಿ ಕಾರ್ಯದರ್ಶಿ ರತನ್ ಕುಮಾರ್ ನಾಯ್ಕ್ ಪರಾಭವಗೊಳಿಸಿದ್ದಾರೆ.
ಸ್ವತಂತ್ರನಾಗಿ ಸ್ಪರ್ಧಿಸಿದ ಐಕ್ಯರಂಗದ ಬೆಂಬಲದಲ್ಲಿ ಮಯ್ಯಳ ವಾರ್ಡ್‍ನಿಂದ ಐತ್ತಪ್ಪ ಡ್ರಾದಲ್ಲಿ ಪರಾಜಯಗೊಂಡಿದ್ದು, ಇಲ್ಲಿ ಸಿಪಿಎಂಗೆ ಅದೃಷ್ಟ ಒಲಿದಿದೆ. ಇಲ್ಲಿ ಸಿಪಿಎಂನ ಮಾಜಿ ಜಿಲ್ಲಾ ಪಂ. ಸದಸ್ಯ ಎಂ. ತಿಮ್ಮಪ್ಪ ಗೆದ್ದಿದ್ದಾರೆ. ಈ ಸೀಟು ಕೂಡಾ ಕಳೆದು ಹೋಗಿದ್ದರೆ ಸಿಪಿಎಂ 3ನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆ ಇತ್ತು. 1ನೇ ವಾರ್ಡ್ ಊಜಂಪಾಡಿಯಲ್ಲಿ ಐಕ್ಯರಂಗದ ಸ್ವತಂತ್ರ ಅಭ್ಯರ್ಥಿ ಐತ್ತಪ್ಪ ನಾಯ್ಕ್ 214 ಮತಗಳ ಬಹುಮತದಿಂದ ಜಯಗಳಿಸಿದ್ದಾರೆ. ಇದು ಸಿಪಿಎಂನ ಸಿಟ್ಟಿಂಗ್ ಸೀಟ್ ಆಗಿತ್ತು. ದೇಲಂಪಾಡಿ ಪಂಚಾಯತಿಯಲ್ಲಿ ಬಿಜೆಪಿ ಕೂಡಾ ತೀವ್ರ ಸ್ಪರ್ಧೆ ಒಡ್ಡಿದೆ. ಸಿಟ್ಟಿಂಗ್ ವಾರ್ಡ್‍ಗಳಾದ ಮೊಗರು, ಬೆಳ್ಳಕಾನ ಎಂಬಿವುಗಳ ಹೊರತಾಗಿ ಪಯರಡ್ಕ, ದೇವರಡ್ಕ ಎಂಬೀ ವಾರ್ಡ್‍ಗಳನ್ನು ಸಿಪಿಎಂನಿಂದ ಅದು ವಶಪಡಿಸಿದೆ. ಬಿಜೆಪಿಗೆ ಇಲ್ಲಿ ಒಟ್ಟು 5 ಸ್ಥಾನ ಲಭಿಸಿದೆ.

