HEALTH TIPS

ಕಳ್ಳತನದ ಶಂಕೆಯಲ್ಲಿ ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆ

ಕೊಚ್ಚಿ: ಕಳ್ಳತನದ ಶಂಕೆಯಲ್ಲಿ 31 ವರ್ಷದ ವಲಸೆ ಕಾರ್ಮಿಕನನ್ನು ಸ್ಥಳೀಯ ನಿವಾಸಿಗಳ ಗುಂಪೊಂದು ಥಳಿಸಿ ಹತ್ಯೆ ನಡೆಸಿದ ಆಘಾತಕಾರಿ ಘಟನೆ  ಪಾಲಕ್ಕಾಡ್ ನ ವಲಯಾರ್ ನಲ್ಲಿ ನಡೆದಿದೆ. 

ಮೃತ ಕಾರ್ಮಿಕನನ್ನು ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದ ರಾಮನಾರಾಯಣ್ ಭಯಾರ್(31) ಎಂದು ಗುರುತಿಸಲಾಗಿದೆ.

ಇವರು ಕಾಂಜಿಕೋಡ್‌ನಲ್ಲಿ ವಾಸಿಸುತ್ತಿದ್ದರು. ಅಟ್ಟಪ್ಪಲ್ಲಂ ಪೂರ್ವದಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಭಯಾರ್ ಎನ್ನುವ ವ್ಯಕ್ತಿ ಕಳ್ಳತನ ನಡೆಸುವ ಉದ್ದೇಶದಿಂದ ಆ ಪ್ರದೇಶದ ಹಲವಾರು ಮನೆಗಳಿಗೆ ನುಗ್ಗಲು ಪ್ರಯತ್ನಿಸಿದ್ದಾನೆ. ಈ ವೇಳೆ ನಡೆದ ಗಲಾಟೆಯಲ್ಲಿ ಆತ ಗಾಯಗೊಂಡಿದ್ದಾನೆ. ನಂತರ ಪೊಲೀಸರು ಸಂಜೆ ಸುಮಾರು 4.30ರ ವೇಳೆಗೆ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

"ಭಯಾರ್ ನಾಲ್ಕು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಕೇರಳಕ್ಕೆ ಬಂದಿದ್ದ. ಸೂಕ್ತ ಉದ್ಯೋಗ ಸಿಗದ ಕಾರಣ ಮನೆಗೆ ಮರಳಲು ಯೋಜಿಸುತ್ತಿದ್ದರು. ಅವರು ಆ ಪ್ರದೇಶಕ್ಕೆ ಹೊಸಬರಾಗಿದ್ದರು. ಅವರಿಗೆ ಸರಿಯಾಗಿ ಮಾರ್ಗಗಳು ತಿಳಿದಿರಲಿಲ್ಲ. ದಾರಿ ತಪ್ಪಿ ಘಟನೆ ನಡೆದ ಸ್ಥಳಕ್ಕೆ ಅವರು ತಲುಪಿರಬೇಕು. ಭಯಾರ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಅವರಿಗೆ 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಸುಳ್ಳು ಆರೋಪದಲ್ಲಿ ರಾಮನಾರಾಯಣ್ ಭಯಾರ್ ಅವರನ್ನು ಗುಂಪು ಥಳಿಸಿ ಹತ್ಯೆ ಮಾಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಭಯಾರ್ ಗಂಭೀರ ಗಾಯಗಳಿಂದ ಮೃತಪಟ್ಟಿರುವುದು ದೃಢಪಟ್ಟಿದೆ" ಎಂದು ಮೃತ ಕಾರ್ಮಿಕನ ಸಂಬಂಧಿಯೋರ್ವರು ಹೇಳಿದ್ದಾರೆ.

"ವಲಯಾರ್ ಬಳಿಯ ಕಿಝಕೆಯಟ್ಟಪ್ಪಲ್ಲಂನಲ್ಲಿ ಕಳ್ಳತನದ ಶಂಕೆಯಲ್ಲಿ ಭಯಾರ್ ಮೇಲೆ ದಾಳಿ ಮಾಡಲಾಗಿದೆ. ಘಟನೆ ಬಗ್ಗೆ ವಿಸ್ಕೃತ ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಭಯಾರ್ ಜಾರ್ಖಂಡ್ ಮೂಲದವ ಎಂದು ಪೊಲೀಸರು ಹೇಳಿದ್ದರು, ಆದರೆ ನಂತರ ಅವರು ಛತ್ತೀಸ್‌ಗಢದ ನಿವಾಸಿ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

Onmanorama ವರದಿಯ ಪ್ರಕಾರ, ಮರಣೋತ್ತರ ಪರೀಕ್ಷೆ ವರದಿಯು ಭಯಾರ್ ಮೇಲೆ ಕೋಲಿನಿಂದ ಕ್ರೂರವಾಗಿ ಹಲ್ಲೆ ನಡೆಸಿರುವುದನ್ನು ಬಹಿರಂಗಪಡಿಸಿದೆ. ಅವರ ತಲೆಯಿಂದ ಕಾಲಿನವರೆಗೆ 80ಕ್ಕೂ ಹೆಚ್ಚು ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ವರದಿಯು ಅವರು ತೀವ್ರವಾದ ಹಲ್ಲೆ ಮತ್ತು ತಲೆಗೆ ಆದ ಗಾಯಗಳಿಂದ ಉಂಟಾದ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ ಮತ್ತು ಆಂತರಿಕ ರಕ್ತಸ್ರಾವವೂ ಕಂಡುಬಂದಿದೆ.

ಮದ್ಯಪಾನ ಮಾಡಿದ್ದ ಭಯಾರ್ ಯಾವುದೇ ಕಳ್ಳತನ ಮಾಡಿಲ್ಲ. ಹಲ್ಲೆಯಿಂದಾಗಿ ರಕ್ತ ವಾಂತಿ ಮಾಡಿ ಅವರು ಕುಸಿದು ಬಿದ್ದರು. ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅವರು ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆಬದಿಯಲ್ಲಿ ಬಿದ್ದುಕೊಂಡಿದ್ದರು.

ಹಲ್ಲೆಯ ದೃಶ್ಯಗಳು ವೈರಲ್‌ ಬಳಿಕ ಪೊಲೀಸರು ಸುಮಾರು 10 ಜನರನ್ನು ವಶಕ್ಕೆ ಪಡೆದು ಬಳಿಕ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ರಾಜ್ಯ ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶಿಸಿದೆ. ಈ ಕುರಿತು ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಪಾಲಕ್ಕಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದೆ.

ಈ ಹತ್ಯೆಯು 2018ರಲ್ಲಿ ಅಟ್ಟಪ್ಪಾಡಿಯ ಕಾಡುಕುಮನ್ನಾ ವಸಾಹತು ಪ್ರದೇಶದಲ್ಲಿ ನಡೆದ ಬುಡಕಟ್ಟು ಯುವಕ ಮಧು ಗುಂಪು ಹತ್ಯೆಯನ್ನು ನೆನಪಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries