ಬ್ರಸೆಲ್ಸ್: ಯುರೋಪ್ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಮೆರಿಕದ ವಿರುದ್ಧ ಐರೋಪ್ಯ ಒಕ್ಕೂಟದ ಉನ್ನತ ಅಧಿಕಾರಿಯೊಬ್ಬರು ಸೋಮವಾರ ಕಿಡಿಕಾರಿದ್ದಾರೆ.
'ಯಾವ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು ಇಲ್ಲಿನ ಜನರೇ ನಿರ್ಧರಿಸುತ್ತಾರೆ' ಎಂದು ಕಟುವಾಗಿ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಶುಕ್ರವಾರ 'ನೂತನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ'ವನ್ನು ಪ್ರಕಟಿಸಿದೆ. ಅದರಲ್ಲಿ ಯುರೋಪ್ನ ಮಿತ್ರ ರಾಷ್ಟ್ರಗಳನ್ನು ದುರ್ಬಲ ಎಂದು ಬಿಂಬಿಸಿ, ಬಲಪಂಥೀಯ ಪಕ್ಷಗಳಿಗೆ ಬೆಂಬಲ ನೀಡಲಾಗಿದೆ. ಈ ಬೆನ್ನಲ್ಲೇ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಯಂಟೊನಿಯೊ ಕೋಸ್ಟಾ ಅವರು ಈ ಹೇಳಿಕೆ ನೀಡಿದ್ದಾರೆ.
'ಕಾರ್ಯತಂತ್ರದಲ್ಲಿ ಯುರೋಪ್ ದೇಶಗಳನ್ನು 'ಮಿತ್ರ ರಾಷ್ಟ್ರಗಳು' ಎಂದು ಹೇಳಲಾಗಿದೆ. ಆದರೆ ಇಲ್ಲಿನ ರಾಜಕೀಯದಲ್ಲಿ ಮಧ್ಯಪ್ರವೇಶಿಸುವ ಅಮೆರಿಕದ ಬೆದರಿಕೆಯನ್ನು ನಾವು ಸ್ವೀಕರಿಸುವುದಿಲ್ಲ. ಯಾವ ಪಕ್ಷ ಒಳ್ಳೆಯದು ಅಥವಾ ಕೆಟ್ಟದ್ದು ಎಂದು ನಿರ್ಧರಿಸುವ ಯುರೋಪ್ ಜನರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.

