ಕಾಸರಗೋಡು: ರಾಷ್ಟ್ರೀಯ ಪಶು ರೋಗ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ, ಡಿಸೆಂಬರ್ 17 ರಿಂದ ರಾಜ್ಯದಲ್ಲಿ ಕಾಲುಬಾಯಿ ರೋಗ ಮತ್ತು ಚರ್ಮಗಂಟುರೋಗದ ವಿರುದ್ಧ ಸಂಯೋಜಿತ ಲಸಿಕೆ ವಿತರಣಾ ಕಾರ್ಯ ಆರಂಭಿಸಲಾಗಿದ್ದು, ಜನವರಿ 23 ರವರೆಗೆನಡೆಯಲಿರುವುದಾಗಿ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಸಂತೋಷ್ ಎನ್.ಕೆ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಕಾಲುಬಾಯಿ ಮತ್ತು ಚರ್ಮಗಂಟು ರೋಗದ ಲಸಿಕೆಯನ್ನು ಜತೆಯಾಗಿ ವಿತರಿಸಲಾಗುತ್ತಿದ್ದು, ಪಶು ಕಲ್ಯಾಣ ಇಲಾಖೆ ಅಧಿಖಾರಿಗಳು ಮನೆಗಳಿಗೆ ಭೇಟಿ ನೀಡಿ ಹಸುಗಳು ಮತ್ತು ಎಮ್ಮೆಗಳಿಗೆ ಉಚಿತ ಲಸಿಕೆ ನೀಡಲಿದ್ದಾರೆ. ಪಶುಸಂಗೋಪನಾ ಇಲಾಖೆ, ಡೈರಿ ಅಭಿವೃದ್ಧಿ ಇಲಾಖೆ, ಡೈರಿ ಸಂಘಗಳು ಮತ್ತು ಸ್ಥಳೀಯ ಸ್ಥಳೀಯಾಡಳಿತ ಸಂಸ್ಥೆಗಳು ಉಚಿತ ಲಸಿಕೆ ನೀಡಲು ಒಟ್ಟಾಗಿ ಕೆಲಸ ಮಾಡುತ್ತವೆ. ಇತರ ಸರ್ಕಾರಿ ಸಂಸ್ಥೆಗಳ ಸಹಕಾರವೂ ಲಭಿಸುತ್ತಿದೆ
ಜಾನುವಾರುಗಳ ಕಾಲುಬಾಯಿ ರೋಗ ಮತ್ತು ಚರ್ಮಗಂಟು ರೋಗ ವೈರಸ್ ವ್ಯಾಧಿಯಾಗಿದ್ದು, ದೇಶದ ಕೃಷಿ ವಲಯಕ್ಕೆ ವಾರ್ಷಿಕವಾಗಿ ಸುಮಾರು 20ಸಾವಿರ ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ನಷ್ಟವನ್ನುಂಟುಮಾಡುತ್ತದೆ. ಕಾಲು ಬಾಯಿ ರೋಗ ಸೋಂಕಿತ ಜಾನುವಾರುಗಳಿಂದ ನೇರ ಅಥವಾ ಪರೋಕ್ಷ ಸಂಪರ್ಕದ ಮೂಲಕ ವೈರಸ್ ಇತರ ಜಾನುವಾರುಗಳಿಗೆ ವೇಗವಾಗಿ ಹರಡಬಹುದಾಗಿದ್ದು, ಇದರಿಂದ ಹಸುಗಳಲ್ಲಿ ಹಾಲಿನ ಉತ್ಪಾದನೆ ಗಮನಾರ್ಹವಾಗಿ ಕಡಿಮೆಯಾಗುವುದಲ್ಲದೆ, ಸಾಕಷ್ಟು ಚಿಕಿತ್ಸೆಯೂ ಅತ್ಯಗತ್ಯ.ನೀಡದಿದ್ದಲ್ಲಿ ಗರ್ಭಿಣಿ ಹಸುಗಳಲ್ಲಿ ಗರ್ಭಪಾತ ಮತ್ತು ಅಕಾಲಿಕ ಸಾವೂ ಸಂಭವಿಸುವ ಸಾಧ್ಯತೆಯಿದೆ. ಚರ್ಮಗಂಟು ರೋಗವೂಮಾರಕವಾಗಿದ್ದು, ಆರಂಭದಲ್ಲೇ ಚಿಕಿತ್ಸೆ ನೀಡಬೇಕು. ಈ ನಿಟ್ಟಿನಲ್ಲಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆ ನೀಡುವುದು ಅನಿವಾರ್ಯ. ನಾಲ್ಕು ತಿಂಗಳು ಅಥವಾ ಅದಕ್ಕಿಂತ ಹೆಚ್ಚುವಯಸ್ಸಾದ ಕರುಗಳಿಗೂ ಲಸಿಕೆ ಹಾಕಬಹುದು. ಪಶು ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 2009 ರ ಪ್ರಕಾರ ಜಾನುವಾರುಗಳಿಗೆ ಈ ಲಸಿಕೆಗಳನ್ನು ನೀಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಮಂಜೇಶ್ವರ ವೆಟರಿನರಿ ಆಸ್ಪತ್ರೆ ಹಿರಿಯ ಪಶುವೈದ್ಯ ಶಸ್ತ್ರಚಿಕಿತ್ಸಕಿ ಡಾ. ಬಬಿತಾ ಎಂ. ಎಂ, ಜಿಲ್ಲಾ ಸಾಂಕ್ರಾಮಿಕ ರೋಗ ತಜ್ಞ ಡಾ. ಕ್ರಿಸ್ ಐನ್ಸ್ಟೈನ್, ಕಾಸರಗೋಡಿನ ತಾಂತ್ರಿಕ ಸಹಾಯಕಿ ಡಾ. ಶರಣ್ಯ ಎಸ್ ಉಪಸ್ಥಿತರಿದ್ದರು.

