ಪಟ್ನಾ: ನೇಮಕಾತಿ ಪತ್ರ ವಿತರಣೆ ವೇಳೆ ಆಯುಷ್ ವೈದ್ಯೆಯೊಬ್ಬರು ಧರಿಸಿದ್ದ ಹಿಜಾಬ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳಚಲು ಯತ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಕೆಲವೇ ದಿನಗಳಲ್ಲಿ ಬಿಹಾರ CM ನಿತೀಶ್ ಅಧಿಕಾರದಿಂದ ಕೆಳಕ್ಕೆ ಇಳಿಯಲಿದ್ದಾರೆ: ಪಾಂಡೆ
ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಮುಖ್ಯಮಂತ್ರಿ ಸಚಿವಾಲಯ 'ಸಂವಾದ'ದಲ್ಲಿ ಹೊಸದಾಗಿ ನೇಮಕಗೊಂಡ 1 ಸಾವಿರಕ್ಕೂ ಅಧಿಕ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ.
ವಿಡಿಯೊದ ನೈಜತೆ ಬಗ್ಗೆ ಖಚಿತವಿಲ್ಲ.
ಮುಖ್ಯಮಂತ್ರಿ ಕಚೇರಿಯ ಮಾಹಿತಿ ಪ್ರಕಾರ, 685 ಆಯುರ್ವೇದ ವೈದ್ಯರು, 393 ಹೋಮಿಯೋಪಥಿ ಹಾಗೂ 205 ಯೂನಾನಿ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ.
ಈ ಪೈಕಿ 10 ಮಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇಮಕಾತಿ ಪತ್ರ ವಿತರಿಸಿದ್ದು, ಉಳಿದವರಿಗೆ ಆನ್‌ಲೈನ್‌ನಲ್ಲಿ ನೀಡಲಾಗಿದೆ.
ನುಸ್ರತ್ ಪರ್ವೀನ್ ಎನ್ನುವವರು ಮುಖ ಮುಚ್ಚಿ ಹಿಜಾಬ್ ಧರಿಸಿ ನೇಮಕಾತಿ ಪತ್ರ ಸ್ವೀಕರಿಸಲು ಬಂದಿದ್ದಾರೆ. ಈ ವೇಳೆ ನಿತೀಶ್ 'ಇದೇನು?' ಎಂದು ಹೇಳಿ ಹಿಜಾಬ್ ಅನ್ನು ಕಳಚಲು ಯತ್ನಿಸಿದ್ದಾರೆ.
ಇದರಿಂದ ಗೊಂದಲಕ್ಕೀಡಾದ ನುಸ್ರತ್‌ರನ್ನು ಅಲ್ಲಿದ್ದ ಅಧಿಕಾರಿಯೊಬ್ಬರು ತರಾತುರಿಯಲ್ಲಿ ಪಕ್ಕಕ್ಕೆ ಎಳೆಯುವುದು ಹಾಗೂ ನಿತೀಶ್ ಕುಮಾರ್ ಅವರನ್ನು ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ತಡೆಯಲು ಯತ್ನಿಸುವುದು ವಿಡಿಯೊದಲ್ಲಿ ದಾಖಲಾಗಿದೆ.
ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್‌ಜೆಡಿ ಹಾಗೂ ಕಾಂಗ್ರೆಸ್, ನಿತೀಶ್ ಕುಮಾರ್ ಅವರ ಮಾನಸಿಕ ಆರೋಗ್ಯ ಸರಿ ಇಲ್ಲ ಎನ್ನುವುದರ ಪ್ರತೀಕ ಎಂದು ಕಿಡಿ ಕಾರಿವೆ.

