ನವದೆಹಲಿ: ಪಶ್ಚಿಮ ಬಂಗಾಳದ ಇಬ್ಬರು ಮಹಿಳೆಯರನ್ನು ಅಕ್ರಮ ವಲಸಿಗರು ಎಂಬ ಕಾರಣಕ್ಕಾಗಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಪ್ರಕರಣವನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಅವರು ಗುರುವಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು.
ಶೂನ್ಯ ವೇಳೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, 'ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ಮಹಿಳೆಯರನ್ನು ಆತುರದಿಂದ ಗಡಿಪಾರು ಮಾಡಲು ಏನು ಕಾರಣ' ಎಂದು ಸರ್ಕಾರವನ್ನು ಪ್ರಶ್ನಿಸಿದರು.
'26 ವರ್ಷದ ಗರ್ಭಿಣಿ ಸುನಾಲಿ ಖಾತೂನ್ ಮತ್ತು 32 ವರ್ಷದ ಸ್ವೀಟಿ ಅವರ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು ಜೂನ್ ತಿಂಗಳಲ್ಲಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಮತ್ತು ಸಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ಸುನಾಲಿ ಅವರಿಗೆ ಭಾರತಕ್ಕೆ ವಾಪಸಾಗಲು ಅನುಮತಿ ದೊರೆತಿದೆ' ಎಂದು ಹೇಳಿದರು.
'ಆತುರದ' ಮತ್ತು ನ್ಯಾಯಯುತ ವಿಚಾರಣೆಯಿಲ್ಲದೆ ಗಡಿಪಾರು ಮಾಡಿದ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ ಎಂದೂ ಅವರು ಹೇಳಿದರು.
'ಸುನಾಲಿ ಮತ್ತು ಸ್ವೀಟಿ ಬೀಬಿ ಅವರನ್ನು ಸರಿಯಾದ ಪ್ರಕ್ರಿಯೆಗಳನ್ನು ಪಾಲಿಸದೆಯೇ ಗಡಿಪಾರು ಮಾಡಿರುವುದರ ಹಿಂದಿನ ಕಾರಣ ಏನು, ಬಂಗಾಳಿ ಮಾತನಾಡುವ ಜನರನ್ನು ನುಸುಳುಕೋರರು ಎಂದು ಕರೆಯುವುದು ಕೇವಲ ರಾಜಕೀಯ ಉದ್ದೇಶದಿಂದಲೇ' ಎಂದು ಪ್ರಶ್ನಿಸಿದರು.

