HEALTH TIPS

ತಿರುಪತಿಗೆ ರೇಷ್ಮೆ ಬದಲು ಪಾಲಿಸ್ಟರ್ ಶಲ್ಯ ಸರಬರಾಜು: ಬೃಹತ್ ಹಗರಣ ಬಯಲು

 ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಶಲ್ಯದ ಹೆಸರಿನಲ್ಲಿ ಪಾಲಿಸ್ಟರ್ ಶಲ್ಯಗಳನ್ನು ಪೂರೈಕೆ ಮಾಡಿರುವ ₹54 ಕೋಟಿಯ ಹಗರಣ ಬೆಳಕಿಗೆ ಬಂದಿದೆ.


2015ರಿಂದ 2025ರವರೆಗೆ ಈ ಹಗರಣ ನಡೆದಿದ್ದು, ದೇವಸ್ಥಾನದ ಆಡಳಿತವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ಸ್(ಟಿಟಿಡಿ) ಟ್ರಸ್ಟ್ ಈ ಹಗರಣದಿಂದ ತಲ್ಲಣಗೊಂಡಿದೆ.

ಗುತ್ತಿಗೆದಾರರೊಬ್ಬರು ಟೆಂಡರ್ ದಾಖಲೆಗಳಲ್ಲಿ ಶುದ್ಧ ಮಲ್ಬೆರಿ ರೇಷ್ಮೆ ಉತ್ಪನ್ನಗಳೆಂದು ಉಲ್ಲೇಖಿಸಿ ಬಿಲ್ ಪಡೆದಿದ್ದು, ಪಾಲಿಸ್ಟರ್ ಶಲ್ಯಗಳನ್ನು ನಿರಂತರವಾಗಿ ಪೂರೈಸಿದ್ದಾರೆ ಎಂದು ಆಂತರಿಕ ಜಾಗೃತ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಶಲ್ಯಗಳ ಕುರಿತಂತೆ ಟಿಟಿಡಿ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅನುಮಾನ ವ್ಯಕ್ತಪಡಿಸಿದ ನಂತರ ನಡೆದ ತನಿಖೆಯಲ್ಲಿ ಸತ್ಯ ಹೊರಬಿದ್ದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಮುಖ ದಾನಿಗಳಿಗೆ ನೀಡಲಾಗುವ ಮತ್ತು ವೇದಾಶಿರ್ವಾಚನದಂತಹ ದೇವಾಲಯದ ಆಚರಣೆಗಳಲ್ಲಿ ಬಳಸಲಾಗುವ ಶಲ್ಯಗಳು ಕಡ್ಡಾಯವಾಗಿ ಶುದ್ಧ ಮಲ್ಬೆರಿ ರೇಷ್ಮೆಯಿಂದ ತಯಾರಿಸಿರಬೇಕೆಂಬ ನಿಯಮವಿದ್ದರೂ ಗುತ್ತಿಗೆದಾರ ಅಗ್ಗದ ಪಾಲಿಸ್ಟರ್ ಉತ್ಪನ್ನಗಳನ್ನು ಪೂರೈಸಿದ್ದಾರೆ.

ಹತ್ತು ವರ್ಷಗಳ ಕಾಲ ಅಕ್ರಮ ನಡೆದಿವೆ ಎಂದು ಅಂದಾಜಿಸಲಾಗಿದೆ. ಇದರ ಪರಿಣಾಮವಾಗಿ ದೇವಾಲಯದ ಟ್ರಸ್ಟ್‌ಗೆ ₹54 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

'ಸುಮಾರು ₹350 ಬೆಲೆಯ ಶಲ್ಯಕ್ಕೆ ₹1,300ರಂತೆ ಬಿಲ್ ಮಾಡಲಾಗುತ್ತಿತ್ತು. ಒಟ್ಟು ₹50 ಕೋಟಿಗೂ ಹೆಚ್ಚು ಮೌಲ್ಯದ ಹಗರಣ ನಡೆದಿದ್ದು, ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ತನಿಖೆಗೆ ಕೇಳಿದ್ದೇವೆ'ಎಂದು ಬಿ.ಆರ್. ನಾಯ್ಡು ಹೇಳಿದ್ದಾರೆ.

ಶಲ್ಯಗಳ ಮಾದರಿಗಳನ್ನು ಕೇಂದ್ರ ರೇಷ್ಮೆ ಮಂಡಳಿ(ಸಿಎಸ್‌ಬಿ) ಅಡಿಯಲ್ಲಿ ಬರುವ ಪ್ರಯೋಗಾಲಯ ಸೇರಿದಂತೆ ಎರಡು ಪ್ರಯೋಗಾಲಯಗಳಿಗೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿತ್ತು. ಇದು ಪಾಲಿಸ್ಟರ್ ಶಲ್ಯ ಎಂದು ಎರಡೂ ಪರೀಕ್ಷೆಗಳು ದೃಢಪಡಿಸಿವೆ ಎಂದು ಅವರು ತಿಳಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries