HEALTH TIPS

ಆರು ರಾಜ್ಯಗಳ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಅವಧಿ ವಿಸ್ತರಣೆ

ನವದೆಹಲಿ: ಭಾರತೀಯ ಚುನಾವಣಾ ಆಯೋಗದಿಂದ (Election Commission of India) ಹನ್ನೊಂದು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರ ಪಟ್ಟಿಯ (voter lists) ವಿಶೇಷ ಪರಿಷ್ಕರಣೆಯು (SIR) ಗುರುವಾರ ಕೊನೆಯಾಗಬೇಕಿತ್ತು. ಆದರೆ ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಗಡುವನ್ನು ಒಂದು ವಾರ ವಿಸ್ತರಿಸಲಾಗಿದೆ.

ಕೇರಳ ರಾಜ್ಯವನ್ನು ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳ ಮತದಾರರ ಪರಿಷ್ಕೃತ ಪಟ್ಟಿಯನ್ನು ಡಿಸೆಂಬರ್ 16ರಂದು ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ ಇದು ಈಗ ವಾರಗಳ ಕಾಲ ಮುಂದೂಡಲ್ಪಟ್ಟಿದೆ.

ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆಯುತ್ತಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಅವಧಿಯನ್ನು ಒಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ. ಆದರೆ ಪಶ್ಚಿಮ ಬಂಗಾಳ, ಗೋವಾ, ರಾಜಸ್ಥಾನ ಮತ್ತು ಲಕ್ಷದ್ವೀಪಗಳ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಅವಧಿ ಗುರುವಾರ ಮುಕ್ತಾಯವಾಗಲಿದೆ. ಕೇರಳ ಸೇರಿದಂತೆ ಉಳಿದಿರುವ ಎಲ್ಲರ ರಾಜ್ಯಗಳ ಮತದಾರರ ಪರಿಷ್ಕೃತ ಪಟ್ಟಿಯನ್ನು ಡಿಸೆಂಬರ್ 18ರೊಳಗೆ ಪ್ರಕಟಿಸುವ ಸಾಧ್ಯತೆ ಇದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಮತದಾರರ ಗಣತಿ ಗಡುವನ್ನು ಡಿಸೆಂಬರ್ 14ರವರೆಗೆ ವಿಸ್ತರಿಸಲಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ಅಂಡಮಾನ್ ಮತ್ತು ನಿಕೋಬಾರ್‌ಗಳಲ್ಲಿ ಗಣತಿ ಗಡುವನ್ನು ಡಿಸೆಂಬರ್ 18 ರವರೆಗೆ ವಿಸ್ತರಿಸಲಾಗಿದೆ. ಉತ್ತರಪ್ರದೇಶದಲ್ಲಿ ಗಣತಿಗೆ ಡಿಸೆಂಬರ್ 26ರಂದು ಅಂತಿಮ ಗಡುವು ನೀಡಲಾಗಿದೆ. ಹೀಗಾಗಿ ತಮಿಳುನಾಡು ಮತ್ತು ಗುಜರಾತ್‌ನ ಕರಡು ಪಟ್ಟಿ ಡಿಸೆಂಬರ್ 19, ಮಧ್ಯಪ್ರದೇಶ, ಛತ್ತೀಸ್‌ಗಢ, ಅಂಡಮಾನ್ ಮತ್ತು ನಿಕೋಬಾರ್‌ಗಳ ಕರಡು ಪಟ್ಟಿ ಡಿಸೆಂಬರ್ 23, ಉತ್ತರಪ್ರದೇಶದ ಕರಡು ಪಟ್ಟಿ ಡಿಸೆಂಬರ್ 31ರಂದು ಬಿಡುಗಡೆಗೊಳಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಇನ್ನು ಗೋವಾ, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಗಣತಿ ಗಡುವು ಮುಗಿದಿದ್ದು, ಕರಡು ಚುನಾವಣಾ ಪಟ್ಟಿ ಡಿಸೆಂಬರ್ 16 ರಂದು ಪ್ರಕಟಿಸಲಾಗುವುದು. ಈ ಹಿಂದೆ ಡಿಸೆಂಬರ್ 18 ರವರೆಗೆ ವಿಸ್ತರಣೆ ನೀಡಿರುವ ಕೇರಳದ ಕರಡು ಪಟ್ಟಿ ಡಿಸೆಂಬರ್ 23ರಂದು ಬಿಡುಗಡೆಯಾಗಲಿದೆ.

ಅರ್ಹ ಮತದಾರರು ಪಟ್ಟಿಯಿಂದ ಹೊರಬೀಳದಂತೆ ಖಚಿತಪಡಿಸಿಕೊಳ್ಳಲು, ಹೊಸ ಮತದಾರರು ಘೋಷಣೆ ಮಾಡಿಕೊಳ್ಳಲು ಫಾರ್ಮ್ 6 ಅನ್ನು ಭರ್ತಿ ಮಾಡಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗದ ವೆಬ್‌ಸೈಟ್ ಅನ್ನು ಬಳಸಬಹುದಾಗಿದೆ. ಇದಕ್ಕಾಗಿ 2026ರ ಫೆಬ್ರವರಿ ವರೆಗೆ ಅವಕಾಶವಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries