ಢಾಕಾ: ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದ ಪ್ರಸಿದ್ಧ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಸಭಾಂಗಣಕ್ಕೆ ಗುಂಡೇನಿಂದ ಹತ್ಯೆಯಾಗಿರುವ ಬಾಂಗ್ಲಾದ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಹೆಸರನ್ನು ಇಡಲಾಗಿದೆ.
ಶರೀಫ್ ಉಸ್ಮಾನ್ ಹಾದಿ ಹತ್ಯೆಯಾದ ಬಳಿಕ ಬಾಂಗ್ಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಈ ವೇಳೆ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಎಂಬುವರನ್ನು ಗುಂಪೊಂದು ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು.
ಶರೀಫ್ ಉಸ್ಮಾನ್ ಹಾದಿ ಶೇಖ್ ಹಸೀನಾ ಸರ್ಕಾರ ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕ್ರೇನ್ ಬಳಸಿ ಮುಜಿಬುರ್ ರೆಹಮಾನ್ ನಾಮಫಲಕವನ್ನು ತೆಗೆದುಹಾಕಲಾಗುವುದು. ಅದಕ್ಕೆ ಉಸ್ಮಾನ್ ಹಾದಿ ಎಂದು ಹೆಸರು ಬದಲಾಯಿಸಲಾಗುವುದು ಎಂದು ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಡಿಯುಸಿಎಸ್‌ಯು) ಸಾಂಸ್ಕೃತಿಕ ವ್ಯವಹಾರಗಳ ಕಾರ್ಯದರ್ಶಿ ಮುಸಾದ್ದಿಕ್ ಇಬ್ನ್ ಅಲಿ ಮೊಹಮ್ಮದ್ ಘೋಷಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.
ಶೇಖ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ.
ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ, ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
ದೀಪು ಹತ್ಯೆಗೆ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಭಾರತ ಆಗ್ರಹಿಸಿದೆ.
'ಬಾಂಗ್ಲಾದೇಶದ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಅಧಿಕಾರಿಗಳು ಬಾಂಗ್ಲಾದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಕಳವಳವನ್ನು ವ್ಯಕ್ತಪಡಿಸಿದ್ದಾರೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

