HEALTH TIPS

ಮನಮೋಹನ್ ಸಿಂಗ್ ರನ್ನು ಅಪಖ್ಯಾತಿಗೊಳಿಸಿದ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಪ್ರಶಾಂತ್ ಭೂಷಣ್

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅಪಖ್ಯಾತಿಗೊಳಿಸಲು ಕಾರಣವಾದ ರಾಜಕೀಯ ಚಳವಳಿಯಲ್ಲಿ ತಾವು ಭಾಗವಹಿಸಿದ್ದುದಕ್ಕೆ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ವಿಷಾದ ವ್ಯಕ್ತಪಡಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಮೊದಲ ಪುಣ್ಯತಿಥಿಯಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಪ್ರಶಾಂತ್ ಭೂಷಣ್ ಅವರು ಸಿಂಗ್ ಅವರನ್ನು "ವಿನಮ್ರ, ಸಭ್ಯ, ಸುಶಿಕ್ಷಿತ ಹಾಗೂ ಘನ ವ್ಯಕ್ತಿತ್ವದ ನಾಯಕ" ಎಂದು ವರ್ಣಿಸಿದ್ದಾರೆ.

ಆದರೆ ಅವರ ಈ ವಿನಮ್ರತೆಯನ್ನೇ ದೌರ್ಬಲ್ಯವೆಂದು ಪರಿಗಣಿಸಿ, ಸಾರ್ವಜನಿಕ ಜೀವನದಲ್ಲಿ ಅವರನ್ನು ನಿಂದಿಸಲಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಮನಮೋಹನ್ ಸಿಂಗ್ ಅವರನ್ನು ಅಪಖ್ಯಾತಿಗೊಳಿಸಲು ನೆರವಾದ ಚಳವಳಿಯೊಂದರಲ್ಲಿ ನಾನು ಭಾಗಿಯಾಗಿದ್ದೆ. ಅದರ ಪರಿಣಾಮವಾಗಿ ಒಂದು ರಾಕ್ಷಸಸ್ವರೂಪದ ಆಡಳಿತ ಅಧಿಕಾರಕ್ಕೆ ಬರಲು ಸಹಕಾರವಾದಂತಾಗಿದೆ. ಇದಕ್ಕಾಗಿ ನನಗೆ ವಿಷಾದವಿದೆ," ಎಂದು ಭೂಷಣ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭೂಷಣ್ ಅವರ ಈ ಹೇಳಿಕೆಯನ್ನು, ಸಿಂಗ್ ಅವರ ನೇತೃತ್ವದ ಎರಡನೇ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ಎರಡನೇ ಅವಧಿಯಲ್ಲಿ ತೀವ್ರಗೊಂಡಿದ್ದ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಉಲ್ಲೇಖಿಸಿ ಪ್ರಶಾಂತ್ ಭೂಷಣ್ ಈ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ನಡೆದ ಈ ಚಳವಳಿ, ಕೇಂದ್ರ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಪ್ರಧಾನ ವಿಷಯವಾಗಿಸಿಕೊಂಡಿತ್ತು.

ಈ ಚಳವಳಿ ದೇಶದ ರಾಜಕೀಯ ವಾತಾವರಣವನ್ನು ಪುನರ್ ಸೃಷ್ಟಿಸಿದ್ದು , ಅದರ ಪರಿಣಾಮವಾಗಿ ಮನಮೋಹನ್ ಸಿಂಗ್ ಅವರ ನಾಯಕತ್ವಕ್ಕೆ ಹಿನ್ನಡೆಯಾಯಿತು. ಕೇಂದ್ರದಲ್ಲಿ ಸರ್ಕಾರ ಬದಲಾವಣೆಗೆ ದಾರಿ ಮಾಡಿಕೊಟ್ಟಿತು ಎಂಬ ಅಭಿಪ್ರಾಯವನ್ನು ಹಲವು ವಿಮರ್ಶಕರು ವ್ಯಕ್ತಪಡಿಸಿದ್ದಾರೆ.

2004ರಿಂದ 2014ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು, ಮಿತಭಾಷೆಯ ಆಡಳಿತ ಶೈಲಿಯ ಮೂಲಕ ಭಾರತದ ಆರ್ಥಿಕ ಸುಧಾರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries