ಭೋಪಾಲ: ಮಧ್ಯಪ್ರದೇಶ ರಾಜ್ಯವು ಕ್ರೀಡೆಗೆ ಕಾಯಕಲ್ಪ ನೀಡುವುದಕ್ಕಾಗಿ ತನ್ನ ಕ್ರೀಡಾ ನೀತಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಲು ಮುಂದಾಗಿದೆ. ಒಲಿಂಪಿಕ್ಸ್, ಏಶ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ರಾಜ್ಯದ ಕ್ರೀಡಾಪಟುಗಳನ್ನು ಇನ್ನು ಮುಂದೆ ನೇರವಾಗಿ ಗಜೆಟಡ್ ಅಧಿಕಾರಿಗಳಾಗಿ ನೇಮಿಸಿಕೊಳ್ಳಲಾಗುವುದು ಎಂದು ರಾಜ್ಯದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ವಿಶ್ವಾಸ್ ಸಾರಂಗ್ ತಿಳಿಸಿದ್ದಾರೆ.
ವಿಕ್ರಮ ಪ್ರಶಸ್ತಿ ವಿಜೇತರಿಗೆ ತೃತೀಯ ದರ್ಜೆ ಮತ್ತು ನಾಲ್ಕನೇ ದರ್ಜೆ ಉದ್ಯೋಗಗಳನ್ನು ನೀಡುವ ಹಾಲಿ ನಿಯಮವನ್ನು ರಾಜ್ಯ ಸರಕಾರ ಅನುಸರಿಸಿದೆ, ಆದರೆ, ಈ ಮಾನದಂಡವು ಹಲವು ಸಂದರ್ಭಗಳಲ್ಲಿ ಅರ್ಹ ಕ್ರೀಡಾಪಟುಗಳಿಗೆ ನಿರ್ಬಂಧ ವಿಧಿಸಿದೆ ಎಂದು ಸಾರಂಗ್ ಹೇಳಿದರು. ಓರ್ವ ವಿಕ್ರಮ ಪದಕ ವಿಜೇತ ತೃತೀಯ ದರ್ಜೆಯ ಉದ್ಯೋಗಕ್ಕೆ ಅರ್ಹರಾದರೆ ಅವರಿಗೆ ತೃತೀಯ ದರ್ಜೆಯ ಉದ್ಯೋಗವನ್ನೇ ನೀಡಲಾಗುವುದು. ನಾವು ಅವರನ್ನು ಜವಾನರಾಗಿ ನೇಮಿಸುತ್ತೇವೆ ಎಂದು ಹೇಳುವುದು ತಪ್ಪು'' ಎಂದು ಅವರು ಹೇಳಿದರು.
''ಈಗ ನಾವು ಸಮಗ್ರ ಕ್ರೀಡಾ ನೀತಿಯೊಂದನ್ನು ಜಾರಿಗೆ ತರುತ್ತಿದ್ದೇವೆ. ಇದರ ಪ್ರಕಾರ, ಒಲಿಂಪಿಕ್ಸ್, ಏಶ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ನಮ್ಮ ಕ್ರೀಡಾಪಟುಗಳನ್ನು ಗಜೆಟಡ್ ಅಧಿಕಾರಿಗಳಾಗಿ ನೇಮಿಸಲಾಗುವುದು'' ಎಂದರು.
ಇತ್ತೀಚೆಗೆ, ಮಧ್ಯಪ್ರದೇಶದ ಅತ್ಯಂತ ಜನಪ್ರಿಯ ಶೂಟರ್ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ರಾಜ್ಯ ಸರಕಾರದ ಈಡೇರದ ಭರವಸೆಗಳ ಬಗ್ಗೆ ಸಾರ್ವಜನಿಕವಾಗಿ ಅತೃಪ್ತಿ ವ್ಯಕ್ತಪಡಿಸಿದ್ದರು. ತಾನು ಇನ್ನು ಮುಂದೆ ಮಧ್ಯಪ್ರದೇಶವನ್ನು ಪ್ರತಿನಿಧಿಸುವುದಿಲ್ಲ ಎಂಬುದಾಗಿಯೂ ಅವರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ, ಕ್ರೀಡಾ ನೀತಿಯಲ್ಲಿ ಬದಲಾವಣೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ ಎನ್ನಲಾಗಿದೆ.

